ರಾಜ್ಯ

2019 ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದ ಶಾಸಕರ ಪೈಕಿ 8 ಮಂದಿಗೆ ಈಗ ಸೋಲು

Srinivas Rao BV

ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಹಲವು ಮಂದಿ ಘಟಾನುಘಟಿ ನಾಯಕರು ಪರಾಭವಗೊಂಡಿದ್ದಾರೆ. ಈ ಪೈಕಿ 2019 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಶಾಸಕರ ಪೈಕಿ 8 ಮಂದಿ ಶಾಸಕರೂ ಸೋತು ತೀವ್ರ ಮುಖಭಂಗ ಎದುರಿಸಿದ್ದಾರೆ.

13 ಕಾಂಗ್ರೆಸ್ ಶಾಸಕರು ಹಾಗೂ ಮೂವರು ಜನತಾದಳದ ಶಾಸಕರು 2019 ರಲ್ಲಿ ರಾಜೀನಾಮೆ ನೀಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದರು.ಈ ಪೈಕಿ 16 ಶಾಸಕರನ್ನು ಅನರ್ಹಗೊಳಿಸಲಾಗಿತ್ತು, ಪುನಃ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಮಂತ್ರಿಗಳಾಗಿದ್ದರು.
 
ಈ ಪಟ್ಟಿಯಲ್ಲಿದ್ದ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ್ ವಿರುದ್ಧ 13,053 ಮತಗಳಿಂದ ಸೋಲು ಕಂಡಿದ್ದರೆ, ಹಿರೇಕೆರೂರು ಶಾಸಕರಾಗಿದ್ದ ಬಿಸಿ ಪಾಟೀಲ್, 15,020 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಉಜನೇಶ್ವರ್ ಬಸವನಪ್ಪ ಬಣಕಾರ್ ವಿರುದ್ಧ ಸೋತಿದ್ದಾರೆ.
 
ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ 10,642 ಮತಗಳಿಂದ ಪರಾಭವಗೊಂಡಿದ್ದರೆ, ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಕಾಂಗ್ರೆಸ್ ನ ಶರತ್ ಕುಮಾರ್ ಬಚ್ಚೇಗೌಡ ವಿರುದ್ಧ 5,150 ಮತಗಳಿಂದ ಸೋತಿದ್ದಾರೆ. ಇನ್ನು ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಕಾಂಗ್ರೆಸ್ ನ ಬಲರಾಮಗೌಡ ವಿರುದ್ಧ 8,827 ಮತಗಳ ಅಂತರದಿಂದ ಸೋತಿದ್ದಾರೆ. 

ಮಹೇಶ್ ಕುಮಠಳ್ಳಿ (ಅಥಣಿ) ಅವರನ್ನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ 76,122 ಸ್ಥಾನಗಳಿಂದ ಸೋಲಿಸಿದರೆ, ಕೆ ಸಿ ನಾರಾಯಣ ಗೌಡ (ಕೆಆರ್ ಪೇಟೆ) ಮತ್ತು ಆರ್ ಶಂಕರ್ (ರಾಣಿಬೆನ್ನೂರು) ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಆತ  33,723 ಮತಗಳಿಂದ ಎಚ್‌ಆರ್ ಗವಿಯಪ್ಪ ವಿರುದ್ಧ ಸೋತಿದ್ದಾರೆ.  ರೋಶನ್ ಬೇಗ್ ಹಾಗೂ ಎಹೆಚ್ ವಿಶ್ವನಾಥ್ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿಲ್ಲ. 

ಆದರೆ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ (ಯಲ್ಲಾಪುರ), ಎಸ್ ಟಿ ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ್ (ಕೆಆರ್ ಪುರಂ), ಎನ್ ಮುನಿರತ್ನ (ಆರ್ ಆರ್ ನಗರ), ರಮೇಶ್ ಜಾರಕಿಹೊಳಿ (ಗೋಕಾಕ) ಮತ್ತು ಕೆ ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ಜಯಗಳಿಸಿದ್ದಾರೆ.

SCROLL FOR NEXT