ರಾಜ್ಯ

ಕರ್ನಾಟಕ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದ್ದು, ರಾಹುಲ್ ಪ್ರಧಾನಿಯಾಗುವ ವಿಶ್ವಾಸವಿದೆ: ಸಿದ್ದರಾಮಯ್ಯ

Manjula VN

ಬೆಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ರಾಹುಲ್‌ ಗಾಂಧಿ ಅವರು, 2024ರಲ್ಲಿ ಪ್ರಧಾನಿಯಾಗುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಜನಾದೇಶವಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸಬೇಕು. ಮುಂದಿನ ದೇಶದ ಪ್ರದಾನಿ ರಾಹುಲ್ ಗಾಂಧಿಯಾಗಬೇಕು ಎಂದು ತಿಳಿಸಿದ್ದಾರೆ.

ರಾಜ್ಯದ ಫಲಿತಾಂಶ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ವಿರುದ್ಧದ ಜನಾದೇಶವಾಗಿದೆ, ಪ್ರಧಾನಿಯವರು 20 ಬಾರಿ ಕರ್ನಾಟಕಕ್ಕೆ ಬಂದಿದ್ದರು, ಈ ಹಿಂದೆ ಯಾವ ಪ್ರಧಾನಿಯೂ ಈ ರೀತಿ ಪ್ರಚಾರ ಮಾಡಿರಲಿಲ್ಲ. ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಕಾಂಗ್ರೆಸ್ 4 ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ 129 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಪಕ್ಷವು 130 ಸ್ಥಾನಗಳನ್ನು ದಾಟಲಿದೆ, ಇದು ಪಕ್ಷಕ್ಕೆ ಲಭಿಸಿರುವ ದೊಡ್ಡ ಜಯ. ಬಿಜೆಪಿ ಸರ್ಕಾರದಿಂದ ಬೇಸತ್ತು ಕರ್ನಾಟಕದ ಜನರು ಬದಲಾವಣೆ ಬಯಸಿದ್ದಾರೆ, ಆಪರೇಷನ್ 'ಕಮಲ'ಕ್ಕೆ ಬಿಜೆಪಿ ಸಾಕಷ್ಟು ಹಣ ಖರ್ಚು ಮಾಡಿದೆ. ರಾಹುಲ್ ಪಾದಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಶಕ್ತಿ ತುಂಬಿತ್ತು ಎಂದರು.

ಇದೇ ಸಂದರ್ಭದಲ್ಲಿ ಸಾಮಾಜಿದ ಜಾಲತಾಣದಲ್ಲೂ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ಇದು ಜಾತ್ಯತೀತ ಪಕ್ಷಕ್ಕೆ ಸಂದ ಜಯ!! ಕರ್ನಾಟಕದ ಜನರು ಸ್ಥಿರ ಸರ್ಕಾರವನ್ನು ಬಯಸಿದ್ದರು ಮತ್ತು ಆದ್ದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ನೀಡಿದ್ದಾರೆಂದು ಹೇಳಿದ್ದಾರೆ.

SCROLL FOR NEXT