ರಾಜ್ಯ

ಬಣ್ಣದ ಕಥೆ ಕಟ್ಟಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಸುಲಿಗೆ, ಆರೋಪಿಯ ಬಂಧನ

Ramyashree GN

ಬೆಂಗಳೂರು: ಅನಾರೋಗ್ಯ ಪೀಡಿತ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಸುಳ್ಳು ಕಥೆಯನ್ನು ಕಟ್ಟಿ ಪ್ರಯಾಣಿಕರಿಂದ ಹಣವನ್ನು ಸುಲಿಗೆ ಮಾಡಲು ಯತ್ನಿಸುತ್ತಿದ್ದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ನಡವಳಿಕೆಯನ್ನು ಕಂಡ ಕೆಲವರು ಅನುಮಾನಗೊಂಡ ಪೊಲೀಸರಿಗೆ ಮಾಹಿತಿ ನೀಡಿದ್ದರು.

 

ದೂರುಗಳ ನಂತರ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಆರೋಪಿ ವಿಘ್ನೇಶ್‌ನನ್ನು ಚೆನ್ನೈನಿಂದ ಕಸ್ಟಡಿಗೆ ತೆಗೆದುಕೊಂಡಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರು ಭಾನುವಾರ ಆತನ ವಿರುದ್ಧ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಐಎಸ್ಎಫ್ ಮೂಲಗಳ ಪ್ರಕಾರ, ಶನಿವಾರ ರಾತ್ರಿ 7.30 ರ ಸುಮಾರಿಗೆ ವಿಘ್ನೇಶ್‌ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. 'ನಾವು ಆತನ ಪರ್ಸಿನಲ್ಲಿ 26 ಕ್ರೆಡಿಟ್ ಕಾರ್ಡ್‌ಗಳು ಇರುವುದನ್ನು ಕಂಡುಕೊಂಡಿದ್ದೇವೆ. ಅವುಗಳಲ್ಲಿ 24 ಮಾನ್ಯವಾಗಿದ್ದವು. ಅಪ್ಪಟ ಪ್ರಯಾಣಿಕನಂತೆ ಕಾಣಿಸಿಕೊಳ್ಳಲು, ಆತ ವಿಮಾನ ನಿಲ್ದಾಣ ಪ್ರವೇಶಿಸಲು ಚೆನ್ನೈಗೆ ಫ್ಲೈಟ್ ಬುಕ್ ಮಾಡಿದ್ದನು. ನಂತರ, ಆಸ್ಪತ್ರೆಗೆ ದಾಖಲಾಗಿರುವ ತಂದೆಗೆ ತುರ್ತು ಚಿಕಿತ್ಸೆಗೆ 8,000 ರಿಂದ 10,000 ರೂ.ಗಳವರೆಗೆ ಹಣವನ್ನು ಕೇಳುತ್ತಿದ್ದನು' ಎಂದು ತಿಳಿಸಿದ್ದಾರೆ.

ಈತ ಇನ್ನೂ ಕೆಲವರು ಭಾಗಿಯಾಗಿರುವ ಗ್ಯಾಂಗ್‌ನ ಭಾಗವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಉನ್ನತ ಮೂಲವೊಂದು ತಿಳಿಸಿದೆ. 

'ವಿಮಾನ ನಿಲ್ದಾಣದಲ್ಲಿ ಈ ರೀತಿಯ ಚಟುವಟಿಕೆ ಅಪರೂಪ. ಎರಡು ವರ್ಷಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT