ರಾಜ್ಯ

ಚುನಾವಣಾ ಫಲಿತಾಂಶ ಬಳಿಕ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಗೆ ಬಿಜೆಪಿ ಖಂಡನೆ

Manjula VN

ಬೆಂಗಳೂರು: ಮೇ 13 ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಗಳ ಸಂಬಂಧ ರಾಜ್ಯ ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಹಿಂಸಾಚಾರ ಖಾತ್ರಿ ಯೋಜನೆ ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ಮತ್ತಿಬ್ಬರು ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. "ಕಾಂಗ್ರೆಸ್ ನಾಯಕರು ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಹಲವಾರು ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಪಾಕಿಸ್ತಾನದ ಧ್ವಜಾರೋಹಣ (ಭಟ್ಕಳ) ಮಾಡಲಾಗಿದೆ. ಇದು ದೇಶ ವಿರೋಧಿ ಕೃತ್ಯವಾಗಿದ್ದು, ಇದನ್ನು ತಡೆಯಬೇಕಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಏತನ್ಮಧ್ಯೆ, ಟ್ವಿಟರ್‌ನಲ್ಲಿಯೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ರಾಜ್ಯ ಕಾಂಗ್ರೆಸ್ ನಾಯಕರು ಆಗಲೇ ಸ್ಥಿಮಿತ ಕಳೆದುಕೊಂಡಿದ್ದು, ಹೊಸಕೋಟೆಯಲ್ಲಿ ವಿಜಯೋತ್ಸವದ ವೇಳೆ ನಮ್ಮ ಕಾರ್ಯಕರ್ತನೊಬ್ಬನ ಹತ್ಯೆಗೈಯಲಾಗಿದೆ. ರಾಜ್ಯಕ್ಕೆ ಗೂಂಡಾರಾಜ್ ತರಲಿರುವ ಕಾಂಗ್ರೆಸ್ಸಿನ ಮುಂದಿನ 5 ವರ್ಷಗಳ ಕಾನೂನು ಸುವ್ಯವಸ್ಥೆಯ ಚಿತ್ರಣ ಮೊದಲ ದಿನವೇ ಜನತೆಗೆ ಗೊತ್ತಾಗಿದೆ ಎಂದು ಹೇಳಿದೆ.

ನಮ್ಮ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ದುಡಿದು ತಿನ್ನುವ ಶ್ರಮಜೀವಿಯೊಬ್ಬನ ಆಟೋವನ್ನು ಜಖಂ ಮಾಡುವ ಕಾಂಗ್ರೆಸ್'ನ ಕ್ರೂರ ಮನಸ್ಥಿತಿ, ಸರ್ಕಾರ ರಚನೆಯಾಗುವ ಮೊದಲೇ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತೀಯ ಶಕ್ತಿಗಳಿಗೆ ಮೊದಲ ದಿನದಿಂದಲೇ ಬೆಂಗಾವಲಾಗಿ ನಿಂತಿರುವುದು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಒಳ್ಳೆಯ ಸೂಚನೆಯಲ್ಲ.

ಪ್ರಜಾಪ್ರಭುತ್ವದಲ್ಲಿ ಗೆಲುವು, ಸೋಲು ಸಾಮಾನ್ಯ. ಆದರೆ ಗೆಲುವಿನ ಮದದಲ್ಲಿ ಕಾಂಗ್ರೆಸ್ ಗೂಂಡಾಗಳು ಭಾಜಪಾ ಕಾರ್ಯಕರ್ತರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಉಂಟು ಮಾಡುವುದನ್ನು ನೋಡಿಯೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ನ ಕಾರ್ಯಕರ್ತರ ಸಹನೆ ಮೀರಿದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಎಚ್ಚರಿಸಿದೆ.

ಮಾಜಿ ಸಚಿವ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರು ಪ್ರತಿಕ್ರಿಯೆ ನೀಡಿ, ಹೊಸಕೋಟೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಮತ್ತು ಹತ್ಯೆ ಖಂಡನೀಯ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆಂದು ತಿಳಿಸಿದ್ದಾರೆ.

SCROLL FOR NEXT