ರಾಜ್ಯ

ನೆಪ ಹೇಳದೆ ತಕ್ಷಣ 5 ಗ್ಯಾರಂಟಿಗಳನ್ನು ಈಡೇರಿಸಿ: ಕಾಂಗ್ರೆಸ್ ಪಕ್ಷಕ್ಕೆ ಜನರ ಆಗ್ರಹ

Sumana Upadhyaya

ಬೆಂಗಳೂರು: ಐದು ಗ್ಯಾರಂಟಿಗಳನ್ನು ಘೋಷಿಸಿ 135 ಶಾಸಕರ ಗೆಲುವಿನೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಚುನಾವಣಾ ಪೂರ್ವ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸಬೇಕೆಂದು ರಾಜ್ಯಾದ್ಯಂತ ಜನಸಾಮಾನ್ಯರ ಕೂಗು ಜೋರಾಗುತ್ತಿದೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ, ಆದರೆ ಷರತ್ತುಗಳೊಂದಿಗೆ ಎಂದು ಹೇಳಿದ್ದರು. ಪ್ರತಿ ಇಲಾಖೆಯ ಸಚಿವರು ಹಲವು ಸುತ್ತಿನ ಸಭೆ, ಸಮಾಲೋಚನೆ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದಿದ್ದರು. 

ಪರಮೇಶ್ವರ್ ಅವರ ಈ ಹೇಳಿಕೆ ಹೊರಬಂದ ತಕ್ಷಣವೇ ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದೇ ಷರತ್ತುಗಳನ್ನು ಹೇರದೆ ಗ್ಯಾರಂಟಿಗಳನ್ನು ಜಾರಿಗೆ ತರಬೇಕು ಎಂದಿದ್ದಾರೆ. ಪಕ್ಷ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೇ ಪಾರದರ್ಶಕವಾಗಿರಬೇಕಿತ್ತು ಎಂದು ಹೇಳಿದೆ. 

ಚುನಾವಣೆಯಲ್ಲಿ ಗೆದ್ದ ಮೇಲೆ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ ಇನ್ನು ಕೆಲವರು ಇದರ ಪರಿಣಾಮ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದಿದ್ದಾರೆ. 

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಗೃಹ ಲಕ್ಷ್ಮಿ ಯೋಜನೆ, ಯುವ ನಿಧಿ ಯೋಜನೆ, ಅನ್ನ ಭಾಗ್ಯ, ಸಖಿ ಕಾರ್ಯಕ್ರಮ ಮತ್ತು ಗೃಹ ಜ್ಯೋತಿ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆ ಮುಂದಿಟ್ಟಿತ್ತು.

SCROLL FOR NEXT