ರಾಜ್ಯ

ಗುಡ್ ನ್ಯೂಸ್: ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಕವರ್‌ ಆಗಲಿದೆ 'ಬಾಡಿಗೆ ತಾಯ್ತನ'!

Manjula VN

ಬೆಂಗಳೂರು: ವೆಚ್ಚ ಭರಿಸಲಾಗದೆ ಬಾಡಿಗೆ ತಾಯ್ತನ ಆಯ್ಕೆಯಿಂದ ದೂರ ಉಳಿದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಬಾಡಿಗೆ ತಾಯ್ತನದ ವೆಚ್ಚ ಭರಿಸುವಂತೆ ಎಲ್ಲಾ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ನಿರ್ದೇಶನ ನೀಡಿದೆ.

ಯಾರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಬೇಕು ಎಂದು ಬಯಸುತ್ತಾರೆ, ಅವರು ಬಾಡಿಗೆ ತಾಯಿಗೆ ವೈದ್ಯಕೀಯ ವೆಚ್ಚದಿಂದ ಹಿಡಿದು, ಭವಿಷ್ಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆಯನ್ನು ನೀಡಬೇಕು ಎಂದು ಹೇಳಿದೆ.

ಮೇ 10ರಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಬಾಡಿಗೆ ತಾಯಿ ಆಗುವವರು ವಿಮಾ ಕಂಪನಿ ಅಥವಾ ಐಆರ್‌ಡಿಎಐ ನಿಂದ ಗುರುತಿಸಲ್ಪಟ್ಟ ಏಜೆಂಟ್‌ನಿಂದ 36 ತಿಂಗಳ ಅವಧಿಗೆ ಬಾಡಿಗೆ ತಾಯಿಯ ಪರವಾಗಿ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಬೇಕು ಎಂದು ಕಡ್ಡಾಯಗೊಳಿಸಿದೆ.

ಬಾಡಿಗೆ ತಾಯಿಯ ಗರ್ಭಧಾರಣೆ ಸಮಯದಲ್ಲಿ ಆಗುವ ತೊಂದರೆ ಮತ್ತು ಹೆರಿಗೆ ಸಮಯದಲ್ಲಿ ಆಗುವ ತೊಡಕುಗಳಿಗೆ ಎಲ್ಲಾ ವೆಚ್ಚವನ್ನು ಈ ವಿಮೆಯಲ್ಲಿ ನೀಡಲಾಗುವುದು ಎಂದು ಹೇಳಿದೆ.

ಗರ್ಭಧಾರಣೆಗೆ ಓಸೈಟ್ ದಾನಿಗಳಿಗೆ 12 ತಿಂಗಳ ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

ಐಆರ್‌ಡಿಎಐನ ಈ ಸುತ್ತೋಲೆಯು ಒಂದು ಒಳ್ಳೆಯ ಕ್ರಮವಾಗಿದೆ, ತಾಯಿ ಮತ್ತು ಬಾಡಿಗೆ ತಾಯಿಯಿಂದ ಪಡೆದ ಮಗುವಿನ ಕುಟುಂಬಕ್ಕೂ ಒಳ್ಳೆಯದು ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್‌ನ ಆರೋಗ್ಯ ಆಡಳಿತ ತಂಡದ ಮುಖ್ಯಸ್ಥ ಭಾಸ್ಕರ್ ನೆರೂರ್ಕರ್ ಅವರು ಹೇಳಿದ್ದಾರೆ.

ವಿಮಾ ಕಂಪನಿಗಳು ದಂಪತಿಗಳಿಗೆ ಪಾಲಿಸಿಯನ್ನು ಹೇಗೆ ಒದಗಿಸಬಹುದು ಎಂಬುದನ್ನು ತಿಳಿಸಿದೆ. ಪ್ಲಮ್ ಇನ್ಶೂರೆನ್ಸ್‌ನ ಕಾರ್ಯತಂತ್ರದ ಮುಖ್ಯಸ್ಥ ಆದಿತ್ಯ ಬಗರ್ಕಾ ಹೇಳಿರುವಂತೆ “ಆಸ್ಪತ್ರೆ, ಡೇ ಕೇರ್ ಚಿಕಿತ್ಸೆಗಳು, ಹೆರಿಗೆ ಮತ್ತು ಸಹಾಯಕ ಸಂತಾನೋತ್ಪತ್ತಿ ತಂತ್ರಗಳು ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕನಿಷ್ಠ ಮಾತೃತ್ವ ಮಿತಿಯವರೆಗೆ ಕವರೇಜ್ ಅನ್ನು ವಿಸ್ತರಿಸಲು ಕಂಪನಿಗಳು ವಿಮಾದಾರರಿಗೆ ನೀಡಬೇಕು ಎಂದು ಹೇಳಿದೆ.

SCROLL FOR NEXT