ರಾಜ್ಯ

ರಾಜ್ಯದಾದ್ಯಂತ ಮಳೆ ಆರ್ಭಟ; ಮನೆಗಳಿಗೆ ನುಗ್ಗಿದ ನೀರು, ಬೆಳೆ ಹಾನಿಯಿಂದ ಹಣ್ಣು-ತರಕಾರಿ ಬೆಲೆ ಏರಿಕೆ ಸಾಧ್ಯತೆ

Ramyashree GN

ಚಿಕ್ಕಬಳ್ಳಾಪುರ: ಭಾನುವಾರ ಮಧ್ಯಾಹ್ನ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಇಡೀ ರಾಜ್ಯಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. 
ಟೊಮೇಟೊ, ಕ್ಯಾಪ್ಸಿಕಂ, ಬೀನ್ಸ್, ಮಾವು, ದ್ರಾಕ್ಷಿ ಹಾಳಾಗಿದ್ದು, ಲಕ್ಷಗಟ್ಟಲೆ ರೂಪಾಯಿ ನಷ್ಟವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಮಳೆಯಿಂದಾಗಿ ಉಂಟಾಗಿರುವ ಈ ಹಾನಿಯು ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಯನ್ನು ಅಡ್ಡಿಪಡಿಸಬಹುದು. ಇದರ ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತದೆ. ಮಳೆಯ ಆರ್ಭಟಕ್ಕೆ ಸಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಗಳು ಧರೆಗುರುಳಿದ್ದು, ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಭಸವಾಗಿ ಬೀಸಿದ ಗಾಳಿಗೆ ಬೇಲಿ ಮುರಿದು ಬಿದ್ದು ಮಾವು ಮತ್ತು ದ್ರಾಕ್ಷಿ ಬೆಳೆಗಾರರು ತೀವ್ರ ನಷ್ಟ ಎದುರಿಸುತ್ತಿದ್ದಾರೆ.

ರೈತರು ಈಗಾಗಲೇ ಬಂಗನಪಲ್ಲೆ, ಬೇನಿಶಾ, ರಾಜಗೀರಾ ಮತ್ತು ರಸಪುರಿ ತಳಿಗಳ ಮಾವು ಕಟಾವು ಆರಂಭಿಸಿದ್ದರು. ಮಳೆಯ ನಂತರ ಕಡಿಮೆ ಬೆಲೆಗೆ ತಮ್ಮ ಉತ್ಪನ್ನ ಮಾರಾಟವಾಗುವ ಆತಂಕವಿದೆ. ಚಿಂತಾಮಣಿ ತಾಲೂಕಿನ ಸಿದ್ದಿಮಠದಲ್ಲಿ ದೊಡ್ಡನತ್ತ ರೈಲ್ವೇ ಕೆಳಸೇತುವೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ತೆರಳಲು ಬಹಳ ದೂರ ಸಾಗಬೇಕಾಗಿದೆ. ಶಿಂಗನಹಳ್ಳಿ ಲಕ್ಷ್ಮಣ ಎಂಬುವರಿಗೆ ಸೇರಿದ ನರ್ಸರಿಗಳು ಹಾಳಾಗಿದ್ದು, ಸರ್ಕಾರ ಹಾಗೂ ತೋಟಗಾರಿಕಾ ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

SCROLL FOR NEXT