ರಾಜ್ಯ

ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ್‌ ನೇಮಕ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌

Srinivasamurthy VN

ಚಿತ್ರದುರ್ಗ:  ಚಿತ್ರದುರ್ಗದ ಮುರುಘರಾಜೇಂದ್ರ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ರದ್ದುಪಡಿಸಿದೆ. 

ಅದಾಗ್ಯೂ, ಪರ್ಯಾಯ ವ್ಯವಸ್ಥೆಯಾಗುವವರೆಗೆ ಆಡಳಿತಾಧಿಕಾರಿ ಮುಂದಿನ ಒಂದು ತಿಂಗಳು ದೈನಂದಿನ ಚಟುವಟಿಕೆ ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದುರ್ಗದ ಡಿ ಎಸ್‌ ಮಲ್ಲಿಕಾರ್ಜುನ ಒಳಗೊಂಡು ಮೂವರು ಹಾಗೂ ಇನ್ನಿತರರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಸ್ತೃತವಾಗಿ ವಿಚಾರಣೆ ನಡೆಸಿ ಏಪ್ರಿಲ್‌ 17ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ವರದಿಯಲ್ಲಿರುವಂತೆ, “ಆಕ್ಷೇಪಾರ್ಹ ಆದೇಶವನ್ನು ರದ್ದುಪಡಿಸಲಾಗಿದೆ. ಮಠದ ಭಕ್ತರು ಮತ್ತು ವೀರಶೈವ ಸಮುದಾಯದ ಪ್ರಮುಖ ವ್ಯಕ್ತಿಗಳು ಮಠ ಮತ್ತು ಅದರ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಸೂಕ್ತ ಯೋಜನೆ ರೂಪಿಸುವವರೆಗೆ ನಾಲ್ಕು ವಾರಗಳ ಕಾಲ ದೈನಂದಿನ ಚಟುವಟಿಕೆ ನಡೆಸಲು ಈಗ ನೇಮಕ ಮಾಡಿರುವ ಆಡಳಿತಾಧಿಕಾರಿಗೆ ಅನುಮತಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿತ್ತು.  ಧಾರ್ಮಿಕ ಸಂಸ್ಥೆ ದುರುಪಯೋಗ ತಡೆ ಕಾಯಿದೆ ಅಡಿಯಲ್ಲಿ ಸತ್ರ ನ್ಯಾಯಾಲಯವು ಮುರುಘಾ ಶರಣರಿಗೆ ವಿಧಿಸಿದ್ದ ತಡೆಯಾಜ್ಞೆಯನ್ನೂ ಹೈಕೋರ್ಟ್‌ ರದ್ದುಪಡಿಸಿದೆ ಎನ್ನಲಾಗಿದೆ.

ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಬಂಧಿತರಾಗಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಸಂಸ್ಥೆಯ ನಿರ್ವಹಣೆ ಹಾಗೂ ದಿನನಿತ್ಯದ ಕಾರ್ಯಚಟುವಟಿಕೆ ಹಾಗೂ ಮೇಲುಸ್ತುವಾರಿ ನಡೆಸಲು ಸಾರ್ವಜನಿಕ ಹಿತದೃಷ್ಟಿಯಿಂದ ಮಠದ ಚರ-ಸ್ಥಿರ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಸಂಸ್ಥೆಯ ಹಣ ದುರುಪಯೋಗವಾಗದಂತೆ ಲೆಕ್ಕಪತ್ರ ನಿರ್ವಹಿಸಲು, ಒಟ್ಟಾರೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸುವ ಹಿತದೃಷ್ಟಿಯಿಂದ ಸಂವಿಧಾನದ 167, 31 (ಎ) ವಿಧಿಯ ಅಡಿ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ವಿವರಿಸಿತ್ತು.

ಶಿವಮೂರ್ತಿ ಮುರುಘಾ ಶರಣರು ಸೆಪ್ಟೆಂಬರ್‌ 1ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಕ್ಟೋಬರ್‌ 22ರಂದು ಚಿತ್ರದುರ್ಗದ ಜಿಲ್ಲಾಧಿಕಾರಿ ವರದಿ ನೀಡಿದ್ದರು. ಅಡ್ವೊಕೇಟ್‌ ಜನರಲ್‌ ಅವರು ಸಂವಿಧಾನದ 162ನೇ ವಿಧಿಯ ಅನ್ವಯ ಟ್ರಸ್ಟಿನ ಸ್ವತ್ತನ್ನು ರಕ್ಷಿಸುವ ದೃಷ್ಟಿಯಿಂದ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಬಹುದು ಎಂದು ಅಭಿಪ್ರಾಯ ನೀಡಿದ್ದರು. ಈ ಹಿನ್ನೆಲೆಯಲ್ಲಿ ನವೆಂಬರ್‌ 4ರಂದು ವಾಸ್ತವಿಕ ವರದಿ ಸಲ್ಲಿಸುವಂತೆ ಚಿತ್ರದುರ್ಗದ ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರ ನಿರ್ದೇಶಿಸಿತ್ತು.

ಸರ್ಕಾರದ ನಿರ್ದೇಶನದ ಅನ್ವಯ ವರದಿ ಸಲ್ಲಿಸಿದ್ದ ಜಿಲ್ಲಾಧಿಕಾರಿಯವರು, ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ವಶದಲ್ಲಿರುವುದರಿಂದ ಮಠದ ಒಟ್ಟು ಸ್ಥಿರಾಸ್ತಿ ಮತ್ತು ಹಣಕಾಸು ನಿರ್ವಹಣೆ ನೋಡಿಕೊಳ್ಳುವುದು ಕಷ್ಟವಾಗಿದೆ. ಟ್ರಸ್ಟ್‌ ಸಾರ್ವಜನಿಕ ಆಸ್ತಿಯಾಗಿರುವುದರಿಂದ ಆಸ್ತಿಗಳ ನಿರ್ವಹಣೆಗೆ ತೊಡಕಾಗುತ್ತಿದೆ. ದುರಾಡಳಿತ ಹಾಗೂ ಹಣಕಾಸು ದುರುಪಯೋಗ ಆದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಂಭವ ಇರುತ್ತದೆ. ಶಿವಮೂರ್ತಿ ಮುರುಘಾ ಶರಣರು ಮಠದ ಆಜೀವ ಪೀಠಾಧಿಪತಿ ಹಾಗೂ ವಿದ್ಯಾ ಸಂಸ್ಥೆಗೆ ಆಜೀವ ಅಧ್ಯಕ್ಷರಾಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಮಠದ ಹಾಗೂ ವಿದ್ಯಾ ಸಂಸ್ಥೆಗೆ ಉಂಟಾಗುವ ಅನನುಕೂಲಗಳನ್ನು ತಪ್ಪಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ವಿವರಿಸಿದ್ದರು. ಇದೆಲ್ಲವನ್ನೂ ಪರಿಗಣಿಸಿ ಸರ್ಕಾರವು ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿದೆ ಎನ್ನಲಾಗಿತ್ತು.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6, 7, ಐಪಿಸಿ ಸೆಕ್ಷನ್‌ಗಳಾದ 376(2), 376 (3), 149 ಅಡಿ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2022ರ ಸೆಪ್ಟೆಂಬರ್‌ 1ರಂದು ಮುರುಘಾ ಶರಣರನ್ನು ಬಂಧಿಸಲಾಗಿದೆ. ಆನಂತರ ಮತ್ತೊಂದು ಪೋಕ್ಸೊ ಪ್ರಕರಣ ಸ್ವಾಮೀಜಿ ಅವರ ವಿರುದ್ಧ ದಾಖಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿ ಸ್ವಾಮೀಜಿಯನ್ನು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
 

SCROLL FOR NEXT