ರಾಜ್ಯ

ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಯುಟಿ ಖಾದರ್ ನಾಮಪತ್ರ ಸಲ್ಲಿಕೆ

Srinivasamurthy VN

ಬೆಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದು, ಇಂದು ಅಧಿಕೃತವಾಗಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು.

ನಿನ್ನೆ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್. ವಿ ದೇಶಪಾಂಡೆ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಹಂಗಾಮಿ ಸ್ಪೀಕರ್ ವಿಶ್ರಾಂತಿ ಹೋದ ಸಂದರ್ಭದಲ್ಲಿ ಪೀಠದಲ್ಲಿ ಸೋಮವಾರ ಕೆಲ ಹೊತ್ತು ಯು.ಟಿ ಖಾದರ್ ಅವರು ಕುಳಿತುಕೊಂಡಿದ್ದರು. ಇದೀಗ ಯು.ಟಿ ಖಾದರ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ.

ಯು.ಟಿ‌ ಖಾದರ್ ಅವರು ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು, ಮಾಜಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2018 ರ ಮೈತ್ರಿ ಸರಕಾರದಲ್ಲಿ ನಗರಾಭಿವ್ರಿದ್ದಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿ ಯಶಶ್ವಿಯಾದರು.ಈ ಸಂದರ್ಭದಲ್ಲಿ ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ,ಕರ್ನಾಟಕ ನಗರನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ,ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ,ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯ ನಿರ್ವಹಿಸಿ ಪ್ರತೀ ಹಂತದಲ್ಲೂ ಸರ್ಕಾರದ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡರು. 

SCROLL FOR NEXT