ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ಗಿರಿ; ಮುಸ್ಲಿಂ ಯುವತಿಯೊಂದಿಗಿದ್ದ ಯುವಕನ ಮೇಲೆ ಹಲ್ಲೆ, ಇಬ್ಬರ ಬಂಧನ

Ramyashree GN

ಚಿಕ್ಕಬಳ್ಳಾಪುರ: ಹಿಂದೂ ಯುವಕ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯು ಹೋಟೆಲ್‌ಗೆ ಬಂದಿದ್ದಕ್ಕೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಚಿಕ್ಕಬಳ್ಳಾಪುರದ ನಕ್ಕಲಕುಂಟೆ ನಿವಾಸಿಗಳಾದ 20 ವರ್ಷದ ವಯೀದ್ ಮತ್ತು 21 ವರ್ಷದ ಸದ್ದಾಂ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಇಮ್ರಾನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ತಮ್ಮ ಧರ್ಮದ ಯುವತಿಯೊಂದಿಗೆ ಸುತ್ತಾಡಿದ್ದಕ್ಕಾಗಿ ಹಿಂದೂ ಯುವಕನಿಗೆ ಥಳಿಸಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಆರೋಪಿಗಳು ಯುವತಿಯ ಮೇಲೂ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತರು ಚಿಕ್ಕಬಳ್ಳಾಪುರದ ಸಣ್ಣ ಹೋಟೆಲ್‌ವೊಂದರಲ್ಲಿ ಕುಳಿತಿರುವುದು ಗ್ಯಾಂಗ್‌ನ ಗಮನಕ್ಕೆ ಬಂದಿದೆ. ಯುವತಿ ಬುರ್ಖಾ ಧರಿಸಿದ್ದಳು. ಆರೋಪಿ ತಂಡವು ಇಬ್ಬರನ್ನು ಗಮನಿಸಿ ಯುವಕ ಹಿಂದೂ ಎಂದು ದೃಢಪಟ್ಟ ಬಳಿಕ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್ ಮೊದಲು ಯುವಕನನ್ನು ಹೊರಗೆ ಕರೆದು ಥಳಿಸಿತು. ಯುವತಿ ಆತನ ರಕ್ಷಣೆಗೆ ಧಾವಿಸಿ, ಆರೋಪಿಗಳ ಕೃತ್ಯಗಳನ್ನು ಪ್ರಶ್ನಿಸಿದ್ದಾಳೆ. ಆದರೆ, ಆರೋಪಿಗಳು ಯುವತಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಬಳಿಕ ಯುವತಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದು ಕಟುವಾಗಿ ಹೇಳಿದ್ದಾರೆ.

SCROLL FOR NEXT