ರಾಜ್ಯ

ಬೆಂಗಳೂರಿನಲ್ಲಿ 3 ವರ್ಷಗಳ ಬಳಿಕ ಶೂನ್ಯ ಕೋವಿಡ್ ಪ್ರಕರಣ ದಾಖಲು

Manjula VN

ಬೆಂಗಳೂರು: ಸಾಂಕ್ರಾಮಿಕ ರೋಗ ಆರಂಭವಾದ ಸುಮಾರು 3 ವರ್ಷಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಶೂನ್ಯ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ರಾಜ್ಯ ರಾಜಧಾನಿಯಲ್ಲಿ ಶನಿವಾರ ಒಟ್ಟು 1,985 ಪರೀಕ್ಷೆಗಳನ್ನು ನಡೆಸಲಾಗಿದ್ದರೂ ಯಾವುದೇ ಸೋಂಕುಗಳು ಪತ್ತೆಯಾಗಿಲ್ಲ. ನಗರದಲ್ಲಿ ಕೇವಲ 12 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಆರು ಪ್ರಕರಣಗಳು ಶಿವಮೊಗ್ಗದಲ್ಲಿಯೇ ವರದಿಯಾಗಿವೆ ಎಂದು ತಿಳಿದುಬಂದಿದೆ.

ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಮಾತನಾಡಿ, "ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿಯು ಶೂನ್ಯ ಹಂತವನ್ನು ತಲುಪಿದೆ, ರೋಗಲಕ್ಷಣ ಇರುವವರು ಪರೀಕ್ಷೆಗೆ ಮುಂದಾಗುತ್ತಿಲ್ಲ. ಹೀಗಾಗಿ ಪರೀಕ್ಷೆಗಳ ಸಂಖ್ಯೆಯು ಒಂದೇ ರೀತಿಯಲ್ಲಿದೆ. ಸಕ್ರಿಯ ಪ್ರಕರಣ ಸಂಖ್ಯೆ ಕೂಡ 3-4 ವಾರಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಏಪ್ರಿಲ್ ಅಂತ್ಯದಿಂದ ರಾಜ್ಯಾದ್ಯಂತ ಪ್ರಕರಣಗಳ ಸಂಖ್ಯೆ 500 ಕ್ಕಿಂತ ಕಡಿಮೆಯಾಗಿದೆ. ಮೇ ತಿಂಗಳ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ  ‘ಕೋವಿಡ್‌–19 ಈಗ ಜಾಗತಿಕ ಆರೋಗ್ಯ ತುರ್ತು ಸ್ಥಿತಿ’ಯಾಗಿ ಉಳಿದಿಲ್ಲ ಎಂದು ಘೋಷಿಸಿತ್ತು. ಆದರೂ, ಭವಿಷ್ಯ ಹೊಸ ವೈರಸ್ ಗಳ ಸೃಷ್ಟಿಯಿಂದ ಸಾರಿ, ಐಎಲ್ಐ ಪ್ರಕರಣಗಳು ಹೆಚ್ಚಾಗಬಹುದು. ಹೀಗಾಗಿ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರುವುದು, ಒಳಚರಂಡಿ ನೀರಿನ ಪರೀಕ್ಷೆಗಳನ್ನು ಮುಂದುವರಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ಮೇ.28 ರಂದು ಅಂದರೆ ಭಾನುವಾರ ರಾಜ್ಯದಲ್ಲಿ ಒಟ್ಟು 5,575 ಪರೀಕ್ಷೆಗಳನ್ನು ನಡೆಸಲಾಗಿದ್ದು, 134 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 16 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಪಾಸಿಟಿವಿಟಿ ದರ ಶೇ.0.46ರಷ್ಟಿದೆ

SCROLL FOR NEXT