ರಾಜ್ಯ

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ವಿರೋಧಿಸಿ ಪ್ರತಿಭಟನೆ: 70 ಮಂದಿ ವಿರುದ್ಧದ ಪ್ರಕರಣ ರದ್ದು!

Manjula VN

ಬೆಂಗಳೂರು: ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣ ಕುರಿತು ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ್ದ 70 ಮಂದಿ ನಾಗರೀಕರು ಹಾಗೂ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರಂತೆ 70 ಮಂದಿಯ ಪೈಕಿ ಅವಿಜಿತ್ ಮೈಕೆಲ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು 70 ಮಂದಿ ವಿರುದ್ಧ ಪ್ರಕರಣ ಕೈಬಿಡುವಂತೆ ಆದೇಶಿಸಿದೆ.

ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಮಂಗಳವಾರ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಹೈಕೋರ್ಟ್ ನಮ್ಮ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುತ್ತದೆ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ. ಇದು ಸಕ್ರಿಯ ನಾಗರಿಕರು ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ ಎಂದು ಅವಿಜಿತ್ ಅವರು ಹೇಳಿದ್ದಾರೆ.

ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣ ಕುರಿತು ಸ್ಯಾಂಕಿ ಟ್ಯಾಂಕ್ ಬಳಿ ಕಪ್ಪು ಪಟ್ಟಿ ಕಟ್ಟಿಕೊಂಡು ನಾಗರೀಕರು ಮೌನ ಮೆರವಣಿಗೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 19, 2023 ರಂದು ಸದಾಶಿವನಗರ ಪೊಲೀಸರು 70 ಮಂದಿ ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು.

ಕಾರ್ಯಕರ್ತರು, ನಾಗರಿಕ ಗುಂಪುಗಳು ಮತ್ತು ರಾಜಕೀಯ ಪಕ್ಷಗಳ ವಿರೋಧದ ನಂತರ, ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಪ್ರತಿಭಟನೆ ನಡೆಸುವಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೇಳಿ, ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿತ್ತು ಎಂದು ಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯೆ ಕಿಮ್ಸುಕಾ ಅಯ್ಯರ್ ಅವರು ಹೇಳಿದ್ದಾರೆ.

SCROLL FOR NEXT