ರಾಜ್ಯ

ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ: ಪ್ರಧಾನಿ ಮೋದಿ

Manjula VN

ನವದೆಹಲಿ/ಬೆಂಗಳೂರು: 68ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕದ ಸಮಸ್ತ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲೇ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹೇಳಿದ್ದಾರೆ.

ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವೆಂದು ಘೋಷಣೆ ಮಾಡಲಾಯಿತು.

ಮೈಸೂರು ರಾಜ್ಯ ನಿರ್ಮಾಣವಾದುದರ ಸಂಕೇತವಾಗಿ ಪ್ರತಿ ವರ್ಷ ನವೆಂಬರ್​ 1 ರಂದು ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ನೆಲಸಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ.

ಈ ದಿನದಂದು ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ನವೆಂಬರ್ 1, 1973 ರಂದು ಮೈಸೂರು ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣ ಮಾಡಲಾಯಿತು. ಈ ವರ್ಷ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷವಾದ ಹಿನ್ನೆಲೆಯಲ್ಲಿ ಕರ್ನಾಟಕ-50 ಎಂಬ ಶಿರ್ಷಿಕೆ ಅಡಿಯಲ್ಲಿ ಸರ್ಕಾರ ವಿಶೇಷವಾಗಿ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.

SCROLL FOR NEXT