ಬೆಂಗಳೂರು: ಖಾಸಗಿ ವೈದ್ಯಕೀಯ ಮೂಲಸೌಕರ್ಯ ವಿಸ್ತರಣೆಯಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳವಾರ ಆಸ್ಟರ್ ಡಿಎಂ ಹೆಲ್ತ್‌ಕೇರ್ ಆರಂಭಿಸಿರುವ 506 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಬೆಂಗಳೂರಿನಲ್ಲಿ ಖಾಸಗಿ ವೈದ್ಯಕೀಯ ಮೂಲಸೌಕರ್ಯವನ್ನು ವಿಸ್ತರಿಸಲು ಹೂಡಿಕೆ ಮಾಡಲಾಗುತ್ತಿದ್ದು, ರಾಜ್ಯದ ವೈದ್ಯಕೀಯ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಖಾಸಗಿಯಾಗಿ ನಡೆಸಲ್ಪಡುವ ಆರೋಗ್ಯ ಸಂಸ್ಥೆಯಾಗಿದ್ದರೂ, 'ಸೇವೆ' ಧ್ಯೇಯವು ಅಖಂಡವಾಗಿರುವುದನ್ನು ಅದು ಖಚಿತಪಡಿಸುತ್ತದೆ ಮತ್ತು ಕೇವಲ ಲಾಭ ಗಳಿಸುವ ಆದ್ಯತೆಯೊಂದೇ ಆಗಿರಬಾರದು ಎಂದು ಒತ್ತಾಯಿಸಿದರು. ಅಂತೆಯೇ ಖಾಸಗಿ ಸಂಸ್ಥೆಗಳೊಂದಿಗೆ ಸಹಕರಿಸಲು ಮತ್ತು ಜನರಿಗೆ ಅಗತ್ಯ ಬೆಂಬಲವನ್ನು ನೀಡಲು ಅವಕಾಶಗಳನ್ನು ವಿಸ್ತರಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ ಪಾಟೀಲ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಚಿವ ಡಾ.ಶರಣ್ ಪ್ರಕಾಶ ಪಾಟೀಲ್ ಅವರು, ರಾಜ್ಯಕ್ಕೆ ವೈದ್ಯಕೀಯ ಪ್ರವಾಸೋದ್ಯಮವನ್ನು ಆಕರ್ಷಿಸುವ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಶ್ಲಾಘಿಸಿದರು. ಖಾಸಗಿ ಸಂಸ್ಥೆಗಳಿಗೆ ಸರಿಸಮನಾಗಿ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರವೂ ಪ್ರಯತ್ನಿಸುತ್ತಿದೆ. ಖಾಸಗಿ ವಲಯವು ವೇಗವಾಗಿ ಪ್ರಗತಿ ಹೊಂದುತ್ತಿದ್ದರೂ, ಶಿಕ್ಷಣಕ್ಕಾಗಿ ಅಥವಾ ನಾಗರಿಕರಿಗೆ ಅವಕಾಶಗಳನ್ನು ಹೆಚ್ಚಿಸುವ ಯಾವುದೇ ಸಂಸ್ಥೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಅಂತೆಯೇ ನಗರದ ಹೊರವಲಯದಲ್ಲಿ ಸೌಲಭ್ಯಗಳನ್ನು ಸ್ಥಾಪಿಸಲು ಹೆಚ್ಚಿನ ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿಯವರೆಗೆ ಪ್ರಾಥಮಿಕವಾಗಿ ಐಟಿ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ವೈಟ್‌ಫೀಲ್ಡ್ ಪ್ರದೇಶ ಇನ್ನು ಮುಂದೆ ಆರೋಗ್ಯ ರಕ್ಷಣೆಗೆ ಹೆಸರುವಾಸಿಯಾಗಲಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಇನ್ನು ಈ ಹೊಸ ಆಸ್ಪತ್ರೆಯು ಬೆಂಗಳೂರಿನಲ್ಲಿ ಆಸ್ಟರ್‌ನ ಮೂರನೇ ಬ್ರಾಂಚ್ ಆಗಿದ್ದು, ಕ್ಯಾನ್ಸರ್‌ನ ನಿಖರ ಚಿಕಿತ್ಸೆಗಾಗಿ ಇಂಟ್ರಾ-ಆಪರೇಟಿವ್ ಎಲೆಕ್ಟ್ರಾನ್ ರೇಡಿಯೇಷನ್ ಥೆರಪಿ (IORT) ಯೊಂದಿಗೆ ಆಸ್ಪತ್ರೆಯನ್ನು ಸುಗಮಗೊಳಿಸಲಾಗಿದೆ. ಹೈಬ್ರಿಡ್ ಬೈಪ್ಲೇನ್ ಕ್ಯಾಥ್‌ಲ್ಯಾಬ್, 3ಡಿ ಮ್ಯಾಮೊಗ್ರಾಮ್, ಡಿಜಿಟಲ್ ಪಿಇಟಿ ಸಿಟಿ, ಡಿಜಿಟಲ್ ರೇಡಿಯಾಗ್ರಫಿ, ಕಿಮೊಥೆರಪಿ ಸಮಯದಲ್ಲಿ ಕೂದಲು ಉದುರುವುದನ್ನು ತಡೆಯಲು ನೆತ್ತಿಯ ಕೂಲಿಂಗ್ ವ್ಯವಸ್ಥೆ ಮತ್ತು ನಾಲ್ಕನೇ ತಲೆಮಾರಿನ ಡಾ ವಿನ್ಸಿ ರೋಬೋಟ್ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಇತರ ತಂತ್ರಜ್ಞಾನಗಳು ಇಲ್ಲಿ ಲಭ್ಯವಿರುತ್ತವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ಎಂಡಿ ಡಾ.ಆಜಾದ್ ಮೂಪೆನ್ ಮಾತನಾಡಿ, "ನಾಗರಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ನಮ್ಮ ವಿಸ್ತರಣೆಯು ಹೊಂದಾಣಿಕೆಯಾಗಿದೆ. ನಾವು ಎಂಟು ವರ್ಷಗಳ ಹಿಂದೆ ಹೆಬ್ಬಾಳದಲ್ಲಿ ಆಸ್ಪತ್ರೆಯೊಂದಿಗೆ ನಮ್ಮ ಸೇವೆ ಪ್ರಾರಂಭಿಸಿದ್ದೇವೆ. ಅಲ್ಲಿಂದ ಇಲ್ಲಿಯವರೆಗೂ 3 ಬ್ರಾಂಚ್ ಗಳನ್ನು ಆರಂಭಿಸಲಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ, ಒಟ್ಟು 1,200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.