ರಾಜ್ಯ

ಕೆಪಿಎಸ್'ಸಿ ಪರೀಕ್ಷೆಗೆ ಬಂದ ಸ್ತ್ರೀಯರ ತಾಳಿ, ಕಾಲುಂಗುರ ತೆಗೆಸಿದ ಸಿಬ್ಬಂದಿ: ಅಭ್ಯರ್ಥಿಗಳ ಆಕ್ರೋಶ, ತನಿಖೆ ನಡೆಸುತ್ತೇವೆಂದ ಸಿಎಂ

Manjula VN

ಕಲಬುರಗಿ: ಕಲಬುರಗಿಯಲ್ಲಿ ಭಾನುವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್'ಸಿ) ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರವೊಂದರ ಸಿಬ್ಬಂದ ಮಹಿಳಾ ಅಭ್ಯರ್ಥಿಗಳ ಕೊರಳಲ್ಲಿನ ತಾಳಿ ಹಾಗೂ ಕಾಲುಂಗುರ ತೆಗೆಸಿದ್ದು, ಇದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಕನ್ನಡ ಭಾಷಾ ವಿಷಯದ ಲಿಖಿತ ಪರೀಕ್ಷೆ ಇತ್ತು, ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಹೆಚ್ಚಿನ ಆದ್ಯತೆ ನೀಡಿದ್ದ ಕರ್ನಾಟಕ ಲೋಕಸೇವಾ ಆಯೋಗ, ಪರೀಕ್ಷಾ ಕೇಂದ್ರಗಳಿಗೆ ಏನೆಲ್ಲಾ ಕೊಂಡೊಯ್ಯಬಹುದು, ಏನನ್ನು ಕೊಂಡೊಯ್ಯಬಾರದು ಎಂಬ ಬಗ್ಗೆ ಪಟ್ಟಿಯನ್ನೇ ಪ್ರಕಟಿಸಿತ್ತು. ಯಾವುದೇ ತರಹದ ಆಭರಣಗಳನ್ನು ಧರಿಸಿಕೊಂಡು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ ಎಂದು ಹೇಳಿತ್ತು.

ಆದರೆ, ಮಹಿಳೆಯ ಮುತ್ತೈದೆತನದ ಸಂಕೇತವಾಗಿರುವ ಮಂಗಳಸೂತ್ರ ಹಾಗೂ ಕಾಲುಂಗುರಗಳನ್ನು ಧರಿಸಲು ಅವಕಾಶ ನೀಡಿತ್ತು. ಆದರೆ, ನಗರದ ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿದ್ದ ಭದ್ರತಾ ಸಿಬ್ಬಂದಿ, ವಿವಾಹಿತ ಮಹಿಳೆಯರು ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಿಕೊಂಡು ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಿಲ್ಲ. ಹೀಗಾಗಿ ಅಭ್ಯರ್ಥಿಗಳು ಅನಿವಾರ್ಯವಾಗಿ ತಾಳಿ ಹಾಗೂ ಕಾಲುಂಗುರ ತೆಗೆದಿಟ್ಟೇ ಪರೀಕ್ಷೆ ಬರೆದಿದ್ದಾರೆ. ಸಿಬ್ಬಂದಿಗಳ ಈ ವರ್ತನೆಗೆ ಅಭ್ಯರ್ಥಿಗಳು ಆಕ್ರೋಶ ಹೊರಹಾಗಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿಸುವುದಾಗಿ ಹೇಳಿದರು.

SCROLL FOR NEXT