ರಾಜ್ಯ

ಬೆಂಗಳೂರು: ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಮರಣೋತ್ತರ ಪರೀಕ್ಷೆಯಿಂದ ಬಹಿರಂಗವಾಯ್ತು ಸತ್ಯ, ಪತಿ ಬಂಧನ

Shilpa D

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣ ಕೊಲೆ ಎಂಬುದು ತಿಳಿದು ಬಂದಿದೆ.

ಪರಪ್ಪನ ಅಗ್ರಹಾರದ ನಂಜಾರೆಡ್ಡಿ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿಯೊಬ್ಬ ಕಥೆ ಕಟ್ಟಿದ್ದ. ಪೊಲೀಸರು ಕೂಡ ಅಸಹಜ ಸಾವೆಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಅನುರಾಧ ಅಲಿಯಾಸ್ ಅಲೀಮಾ (31) ಹತ್ಯೆಯಾದವಳು. ರಾಜಶೇಖರ್‌ ಕೊಲೆ ಆರೋಪಿಯಾಗಿದ್ದಾನೆ. ಅನುರಾಧ ರಾಜಶೇಖರ್ ಜತೆ ಎರಡನೇ ಮದುವೆಯಾಗಿದ್ದಳು. ಮೊದಮೊದಲು ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆ ರಾಜಶೇಖರ್ ಅನುರಾಧ ಸ್ನೇಹಿತಯ ಜೊತೆಗೆ ಸಂಪರ್ಕ ಹೊಂದಿದ್ದ. ಸದಾ ಆಕೆಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ಇದೇ ವಿಚಾರಕ್ಕೆ ಅನುರಾಧ ಹಾಗೂ ರಾಜಶೇಖರ್‌ ನಡುವೆ ಗಲಾಟೆ ನಡೆಯುತ್ತಲೆ ಇತ್ತು.

ಹತ್ಯೆ ದಿನವು ಅನುರಾಧ ಹಾಗೂ ರಾಜಶೇಖರ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ರಾಜಶೇಖರ್‌ ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಬಳಿಕ ಅನುರಾಧಳನ್ನು ಆಸ್ಪತ್ರೆಗೂ ದಾಖಲು ಮಾಡಿದ್ದ.

ಮಾತ್ರವಲ್ಲ ಅನುಮಾನ ಬಾರದೆ ಇರಲಿ ಎಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದ. ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ರಹಸ್ಯ ಹೊರಬಂದಿದೆ. ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ.

ಕೂಡಲೇ ರಾಜಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆತ್ಮಹತ್ಯೆ ಬದಲಿಗೆ ಕೊಲೆ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತನ್ನ ಮೊದಲ ಗಂಡನ ಮರಣದ ನಂತರ, ಅಲೀಮಾ ರಾಜಶೇಖರ್ ಅವರನ್ನು ವಿವಾಹವಾದರು ಮತ್ತು ನಂತರ ತನ್ನ ಹೆಸರನ್ನು ಅನುರಾಧ ಎಂದು ಬದಲಾಯಿಸಿಕೊಂಡರು. ಆಕೆಗೆ ಮೊದಲ ಪತಿಯಿಂದ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮದುವೆಯಿಂದ ಆಕೆಗೆ ಎರಡು ತಿಂಗಳ ಮಗುವಿದೆ. ಸಂತ್ರಸ್ತೆ ಮತ್ತು ರಾಜಶೇಖರ್ ಇಬ್ಬರೂ ಪಾವಗಡ ಮೂಲದವರಾಗಿದ್ದು, ಅಲ್ಲಿ ಭೇಟಿಯಾಗಿದ್ದರು.

ಅನುರಾಧಾ ಶವವಾಗಿ ಪತ್ತೆಯಾದ ನಂತರ, ಆಕೆಯ ಪೋಷಕರು ವಿಷಯವನ್ನು ಮುಂದುವರಿಸಲು ಬಯಸಲಿಲ್ಲ, ತಮ್ಮ ಅಳಿಯನಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT