ರಾಜ್ಯ

ಸಿಎಂ ಕಾರ್ಯಕ್ರಮಕ್ಕಾಗಿ ಹಂಪಿ ದೇಗುಲದ ಕಂಬ ವಿರೂಪಗೊಳಿಸಿದ ಅಧಿಕಾರಿಗಳು: ದತ್ತಿ ಇಲಾಖೆಗೆ ನೋಟಿಸ್ ಜಾರಿ

Manjula VN

ಹುಬ್ಬಳ್ಳಿ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಧ್ವಜ ಕಟ್ಟುವ ಸಲುವಾಗಿ  ವಿಶ್ವ ಪಾರಂಪರಿಕ ತಾಣದ ಪ್ರಮುಖ ಭಾಗವಾದ ಹಂಪಿ ವಿರೂಪಾಕ್ಷ ದೇವಸ್ಥಾನದ ಕಲ್ಲಿನ ಕಂಬವನ್ನು ವಿರೂಪಗೊಳಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಪಿಲ್ಲರ್ ಒಂದರಲ್ಲಿ ಮೊಳೆ ಹಾಕಲು ಡ್ರಿಲ್ಲಿಂಗ್ ಮಷಿನ್ ಬಳಸಿರುವುದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಗಮನಕ್ಕೆ ಬಂದಿದೆ. ಈ ಸಂಬಂಧ (ಎಎಸ್‌ಐ) ದತ್ತಿ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಕೂಡಲೇ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ಕಳೆದ ವಾರ ನಡೆದ ಕಾರ್ಯಕ್ರಮದ ವೇಳೆ ಕಲ್ಲಿನ ಕಂಬಕ್ಕೆ ಧ್ವಜ ಅಳವಡಿಸಲಾಗಿದ್ದು, ಕಂಬಗಳಲ್ಲಿದ್ದ ಅಲಂಕಾರಿಕ ವಸ್ತುಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಘಟನೆ ಘಟನೆ ಬೆಳಕಿಗೆ ಬಂದಿದೆ.

ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಪ್ರಭಾರ ಅಧಿಕಾರಿಯನ್ನು ಕರೆಸಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಎಸ್‌ಐ ಹಾನಿಯನ್ನು ಗಮನಿಸಿದೆ. ಪಿಲ್ಲರ್‌ನಲ್ಲಿ ಹಾನಿಗೊಳಗಾದ ಭಾಗದ ಛಾಯಾಚಿತ್ರಗಳನ್ನು ದಾಖಲಾತಿಗಾಗಿ ತೆಗೆದುಕೊಳ್ಳಲಾಗಿದೆ. ಹಂಪಿ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವುದರಿಂದ ಪಾರಂಪರಿಕ ಸ್ಮಾರಕಗಳಿಗೆ ಸಣ್ಣದೊಂದು ಹಾನಿಯಾದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕೊರೆಯುವಾಗ ಸ್ಥಳೀಯ ಅಧಿಕಾರಿಗಳು ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಈ ನಡುವೆ ಕಂಬವನ್ನು ವಿರೂಪಗೊಳಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕನ್ನಡ ಜ್ಯೋತಿ ಕಾರ್ಯಕ್ರಮದ ದಿನ ಕಂಬಗಳಿಗೆ ನಾಡ ಧ್ವಜಗಳನ್ನು ಕಟ್ಟಲಾಗಿತ್ತು. ಕಂಬವನ್ನು ಕೊರೆದಿದ್ದರೂ ಸ್ಥಳೀಯ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಹಂಪಿಯಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆದಾಗ ಎಎಸ್‌ಐ ಮತ್ತು ಹಂಪಿ ಆಡಳಿತಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

SCROLL FOR NEXT