ರಾಜ್ಯ

ಹಾಸನಾಂಬ ದೇವಸ್ಥಾನದಲ್ಲಿ ವಿದ್ಯುತ್ ಅವಘಡ: ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೇವಣ್ಣ ಆಗ್ರಹ

Lingaraj Badiger

ಹಾಸನ: ಇತ್ತೀಚೆಗೆ ಹಾಸನಾಂಬ ದೇವಸ್ಥಾನದ ಭಕ್ತರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ಗುತ್ತಿಗೆದಾರರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಒತ್ತಾಯಿಸಿದ್ದಾರೆ. 

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸರತಿ ಸಾಲಿನಲ್ಲಿ ನಿಂತಿದ್ದ 18 ಭಕ್ತರಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು. ಭಕ್ತರು ಸ್ಥಳದಿಂದ ಕದಲದಿದ್ದರೆ ಘಟನೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ 2024ರ ಲೋಕಸಭೆ ಚುನಾವಣೆಗೂ ಮುನ್ನ ಜೆಡಿಎಸ್‌ ಖಾಲಿಯಾಗುತ್ತದೆ ಎಂಬ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿ ರೇವಣ್ಣ, ಚಿಲ್ಲರೆ ಅಂಗಡಿಗಳಿಗೆ ಮದ್ಯ ಪೂರೈಕೆಯಿಂದ ಕಂಗೆಟ್ಟಿರುವ ಗ್ರಾಮೀಣ ಜನರ ಸಮಸ್ಯೆಗಳ ಬಗ್ಗೆ ಸಚಿವರು ಮೊದಲು ಗಮನಹರಿಸಬೇಕು ಎಂದರು. 

ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

SCROLL FOR NEXT