ರಾಜ್ಯ

ಪಟಾಕಿ ಹಚ್ಚುವ ವೇಳೆ ದುರಂತ: ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆ

Sumana Upadhyaya

ಬೆಂಗಳೂರು: ಸರ್ಕಾರ, ಗಣ್ಯರು, ವೈದ್ಯರು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚುವ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಎಷ್ಟೇ ಹೇಳಿದರೂ ಪಟಾಕಿ ದುರಂತಗಳು ಪ್ರತಿವರ್ಷ ಪುನರಾವರ್ತನೆಯಾಗುತ್ತದೆ.

ಪಟಾಕಿ ಸಂಬಂಧಿತ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಪೈಕಿ ಸರ್ಕಾರಿ ಆಸ್ಪತ್ರೆಗೆ 17 ಜನ ದಾಖಲಾಗಿದ್ದರೆ, 26 ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆಯ ಹೊತ್ತಿಗೆ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಮತ್ತೆ ನಾಲ್ಕು ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಗಾಯ ಮಾಡಿಕೊಂಡ ನಾಲ್ಕು ಮಂದಿಯಲ್ಲಿ ಮೂವರು ದಾರಿಹೋಕರಾಗಿದ್ದಾರೆ. 

ಮೂವರಿಗೆ ಸಣ್ಣಮಟ್ಟಿಗೆ ಕಣ್ಣಿನ ಗಾಯಗಳಾಗಿದ್ದರೆ, 22 ವರ್ಷದ ಯುವಕನಿಗೆ ಗಂಭೀರವಾದ ಗಾಯಗಳಾಗಿವೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ. ಭಾನುವಾರ ಮತ್ತು ನಿನ್ನೆ ಸೋಮವಾರದವರೆಗೆ ನಾರಾಯಣ ನೇತ್ರಾಲಯದಲ್ಲಿ 26 ಮಂದಿ ಪಟಾಕಿ ಗಾಯಗೊಂಡ ರೋಗಿಗಳು ಕಾಣಿಸಿಕೊಂಡಿದ್ದು, ಅವರಲ್ಲಿ 13 ಮಂದಿ ಮಕ್ಕಳಾಗಿದ್ದಾರೆ. 

ಎಲ್ಲಾ ರೋಗಿಗಳಿಗೆ ಔಷಧೋಪಚಾರದ ಅಗತ್ಯವಿದೆ. ಇಲ್ಲಿಯವರೆಗೆ ನೋಡಿದ ಯಾವುದೇ ರೋಗಿಗಳಿಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಅವರಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಹನ್ನೆರಡು ರೋಗಿಗಳು ಹೊರರೋಗಿಗಳಾಗಿದ್ದಾರೆ. ಹೆಚ್ಚಿನ ರೋಗಿಗಳು ಬೆಂಗಳೂರಿನ ನಿವಾಸಿಗಳಾಗಿದ್ದರೆ, ಒಬ್ಬರು ಬಿಹಾರದಿಂದ ಬಂದವರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ನಿನ್ನೆ ರಾಮಮೂರ್ತಿ ನಗರದ ಮೂರುವರೆ ವರ್ಷದ ಮಗುವಿಗೂ ಪಟಾಕಿಯಿಂದ ಗಂಭೀರ ಗಾಯವಾಗಿದೆ. ಸುರುಸುರು ಬತ್ತಿ ಹಚ್ಚುವಾಗ ಕಣ್ಣಿಗೆ ಕಿಡಿ ತಾಗಿದ್ದು, ಮಗುವಿಗೆ ಮೈನರ್‌ ಇಂಜುರಿಯಾಗಿದೆ. ಶ್ರೀರಾಂಪುರದ ಯುವಕನೊಬ್ಬ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದ ಈ ವೇಳೆ ಯಾರೋ ಹಚ್ಚಿದ ಪಟಾಕಿ ಯುವಕನ ಕಣ್ಣಿಗೆ ಸಿಡಿದಿದೆ. ಇದರಿಂದ ಐಬಾಲ್‌ಗೆ ಗಂಭೀರ ಗಾಯ ಆಗಿದ್ದು, ಒಳಗಡೆ ರಕ್ತ ಹೆಪ್ಪುಗಟ್ಟಿದೆ. ಇದೇ ರೀತಿ ಬನ್ನೇರುಘಟ್ಟದ ವ್ಯಕ್ತಿಯ ಕಣ್ಣಿಗೆ ಲಕ್ಷ್ಮೀ ಪಟಾಕಿ ಸಿಡಿದು ಗಾಯವಾಗಿದೆ.

SCROLL FOR NEXT