ರಾಜ್ಯ

ಇಂದು ಬಾಗಿಲು ಮುಚ್ಚಲಿರುವ ಹಾಸನಾಂಬೆ: 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳಿಂದ ದರ್ಶನ

Sumana Upadhyaya

ಹಾಸನ: ವರ್ಷಕ್ಕೆ ಒಂದೇ ಬಾರಿ ಬಾಗಿಲು ತೆಗೆದು 13 ದಿನಗಳ ಕಾಲ ಸಾರ್ವಜನಿಕ ಭಕ್ತರಿಗೆ ದರುಶನ ನೀಡಿದ ಹಾಸನಾಂಬೆಗೆ ಇಂದು ಬುಧವಾರ ಬಾಗಿಲು ಮುಚ್ಚಲಾಗುತ್ತದೆ. 

ನಿನ್ನೆ ದೀಪಾವಳಿ ಬಲೀಂದ್ರ ಪೂಜೆ ದಿನವೇ ಭಕ್ತರ ದರ್ಶನಕ್ಕೆ ಕೊನೆ ದಿನವಾಗಿತ್ತು. ಭಕ್ತರು ಬಹಳ ಸಂಖ್ಯೆಯಲ್ಲಿ ಇದ್ದ ಕಾರಣ ಇಂದು ಮುಂಜಾನೆ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಸನಾಂಬ ದೇವಾಲಯ ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಬಾಗಿಲು ತೆರೆಯಲಾಗಿತ್ತು.

ಇಂದು ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಾಸನಾಂಬ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಧ್ಯಾಹ್ನ 12 ಗಂಟೆಗೆ ದೇಗುಲ ಮುಚ್ಚಲಿದೆ. ಇನ್ನು ಬಾಗಿಲು ತೆರೆಯುವುದು ಮುಂದಿನ ವರ್ಷವೇ. ದೇವಾಲಯದ ಬಾಗಿಲು ತೆರೆಯುವ ಮೊದಲ ದಿನ ಹಾಗೂ ಕೊನೇಯ ದಿನ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಕಳೆದ 12 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ. 12 ಗಂಟೆಗೆ ಪೂಜಾವಿಧಿವಿಧಾನಗಳ ಮೂಲಕ ದರ್ಶನಕ್ಕೆ ತೆರೆ ಬೀಳಲಿದೆ. ಅಲಂಕಾರವನ್ನು, ಬಂಗಾರವನ್ನು ತೆಗೆಯಲಾಗುತ್ತದೆ. ಕಡೆಗೊಮ್ಮೆ ಶಕ್ತಿದೇವಿಯ ವಿಶ್ವರೂಪ ದರ್ಶನ ಅಲ್ಲಿ ನೆರೆದಿದ್ದ ಭಕ್ತರಿಗೆ ತೋರಿಸಲಾಗುತ್ತದೆ. ಅಧಿಕಾರಿಗಳು, ಅರ್ಚಕರ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಗುತ್ತದೆ. ಹಚ್ಚಿಟ್ಟ ದೀಪ ಮುಂದಿನ ವರ್ಷದವರೆಗೂ ಉರಿಯುತ್ತಿರುತ್ತದೆ, ಹೂವುಗಳು ಬಾಡಿರುವುದಿಲ್ಲ ಎಂಬ ನಂಬಿಕೆ ಇದೆ. 

SCROLL FOR NEXT