ರಾಜ್ಯ

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ ವಿಷಾದ

Manjula VN

ಬೆಂಗಳೂರು: ಮನೆಯ ಸಾಕು ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ಸಂಬಂಧ ನಟ ದರ್ಶನ್ ಅವರು ಬುಧವಾರ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದು, ಈ ವೇಳೆ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸುಮಾರು 20 ನಿಮಿಷಗಳ ಕಾಲ ರಾಜರಾಜೇಶ್ವರಿನಗರ ಠಾಣೆ ಇನ್ಸ್ ಪೆಕ್ಟರ್ ಅವರು ನಟ ದರ್ಶನ್ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಈ ವೇಳೆ ದರ್ಶನ್ ಅವರು ಇಂತಹ ಘಟನೆ ನಡೆಯಬಾರದಿತ್ತು. ನಮ್ಮ ಮನೆಯ ಸಹಾಯಕನಿಗೆ ಸೂಕ್ತ ತಿಳುವಳಿಕೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಂದ ಇರುವಂತೆ ಸೂಚಿಸಿದ್ದೇನೆ. ಅನಿರೀಕ್ಷಿತವಾಗಿ  ನಡೆದ ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ವಿಚಾರ ತಿಳಿದ ಕೂಡಲೇ ವೈದ್ಯಕೀಯ ವೆಚ್ಚ ಭರಿಸುವಂತೆ ಸಿಬ್ಬಂದಿಗಳಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೇಳಿದಾಗ, ಮನೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಶೀಘ್ರದಲ್ಲೇ ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ದರ್ಶನ್ ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.

ಈ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ ಪ್ರತಿಕ್ರಿಯೆ ನೀಡಿದ್ದರು. ಆರ್‌ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದೆ. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‌ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಮಾತನಾಡಿದ್ದರು.

ಮಾತಿನ ಚಕಮಕಿಯ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಅವರ ಸಿಬ್ಬಂದಿ ನಾಯಿಗೆ ಇಂಜೆಕ್ಷನ್ ಆಗಿದೆ ಹೋಗಿ ಎಂದು ಕಳುಹಿಸಿದ್ದರು. ಸ್ನೇಹಿತರ ಮಗನ ಸಹಾಯದಿಂದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದಿದ್ದೆ. ಬಳಿಕ ಆರ್‌ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದು ವಿವರಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಬ್ಬಂದಿಯನ್ನ ಮೊದಲ ಆರೋಪಿ, ದರ್ಶನ್‌ರನ್ನು ಎರಡನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.

SCROLL FOR NEXT