ರಾಜ್ಯ

ಪೆರಿಫೆರಲ್ ರಿಂಗ್ ರೋಡ್ ಯೋಜನೆ: ಖಾಸಗಿಯವರಿಗೆ ಭೂಮಿ ಮಾರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ!

Nagaraja AB

ಬೆಂಗಳೂರು: 16 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೆರಿಫರಲ್ ರಿಂಗ್ ರೋಡ್ ಯೋಜನೆಗಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಈ ರಸ್ತೆಯುದ್ದಕ್ಕೂ ಇರುವ ಸರ್ಕಾರಿ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ, ಬಳ್ಳಾರಿ, ಹೆಣ್ಣೂರು, ಹಳೆಯ ಮದ್ರಾಸ್, ಹೊಸಕೋಟೆ ಮತ್ತು ಸರ್ಜಾಪುರ ರಸ್ತೆ ಮೂಲಕ ತುಮಕೂರು ಮತ್ತು ಹೊಸೂರು ರಸ್ತೆಗಳನ್ನು ಸಂಪರ್ಕಿಸುವ 74-ಕಿಮೀ ಉದ್ದದ ಎಂಟು ಪಥದ ರಸ್ತೆ ಅಭಿವೃದ್ಧಿ ಯೋಜನೆ ಇದಾಗಿದೆ. ಇದಕ್ಕಾಗಿ ಸರ್ಕಾರ ಪೆರಿಫೆರಲ್ ರಿಂಗ್ ರಸ್ತೆ ಸುತ್ತಮುತ್ತಲಿನ ಮತ್ತು  ನಗರದಲ್ಲಿ ಮಾರಾಟ ಮಾಡಬಹುದಾದ ಭೂಮಿಯ ಸರ್ವೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

2007 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ರೂಪಿಸಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆಗಾಗಿ ಫೆಬ್ರವರಿ 2022 ರಲ್ಲಿ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಿತು. ಆದಾಗ್ಯೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸೆಪ್ಟೆಂಬರ್ 2022 ರಲ್ಲಿ ಕೊನೆಯ ಟೆಂಡರ್  ರದ್ದುಗೊಂಡಿತ್ತು.

16 ವರ್ಷಗಳ ನಂತರವೂ ಯೋಜನೆಯ ಸ್ಥಿತಿ ಹಾಗೆಯೇ ಇದೆ. ನ್ಯಾಯಯುತ ಪರಿಹಾರದ ಹಕ್ಕು ಕಾಯಿದೆಯಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಇನ್ನೂ ಹೆಣಗಾಡುತ್ತಿದೆ. 2,680 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ 15,000 ಕೋಟಿ ರೂ. ಅಗತ್ಯವಿದೆ.  

ಅರ್ಧ ಭಾಗದಲ್ಲಿ ನೈಸ್ ರಸ್ತೆ ನಿರ್ಮಿಸಿರುವುದರಿಂದ ಮೆಟ್ರೋ ಮಾರ್ಗ ನಿರ್ಮಾಣ ಕೂಡಾ ಸಾಧ್ಯವಾಗಿಲ್ಲ. ಈಗ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಹಣದ ಅಗತ್ಯವಿದ್ದು, ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT