ರಾಜ್ಯ

Murugha Shree Arrest: ಲೈಂಗಿಕ ಕಿರುಕುಳ ಪ್ರಕರಣ; ಮತ್ತೊಮ್ಮೆ ಡಾ. ಶಿವಮೂರ್ತಿ ಮುರುಘಾ ಶರಣ ಬಂಧನ!

Vishwanath S

ದಾವಣಗೆರೆ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಒಂದು ವರ್ಷ ಹಿಂದೆ ಜೈಲು ಪಾಲಾಗಿ ನಾಲ್ಕು ದಿನಗಳ ಹಿಂದೆ ಜಾಮೀನು ಮೇಲೆ ಹೊರಬಂದಿದ್ದ ಚಿತ್ರದುರ್ಗದ ಮರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಮತ್ತೆ ಬಂಧಿಸಲಾಗಿದೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಮುರುಘಾ ಶ್ರೀ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಹೀಗಾಗಿ ದಾವಣಗೆರೆಯ ವಿರುಕ್ತ ಮಠಕ್ಕೆ ಆಗಮಿಸಿದ ಪೊಲೀಸರು ಶ್ರೀಗಳನ್ನು ಬಂಧಿಸಿದ್ದು ಚಿತ್ರದುರ್ಗಕ್ಕೆ ಕರೆದೊಯ್ಯುತ್ತಿದ್ದಾರೆ.

ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ ಕೆ ಕೋಮಲಾ ಅವರು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಮಂಗಳವಾರದೊಳಗೆ ಶಿವಮೂರ್ತಿ ಶರಣರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

2022ರ ಸೆಪ್ಟೆಂಬರ್ 1 ರಿಂದ ಬಂಧನದಲ್ಲಿದ್ದ ಮುರುಘಾ ಶ್ರೀಗಳ ವಿರುದ್ಧ ಎರಡು POCSO ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಮೊದಲ ಪ್ರಕರಣದಲ್ಲಿ ನವೆಂಬರ್ 8ರಂದು ಹೈಕೋರ್ಟ್‌ ಜಾಮೀನು ನೀಡಿದ್ದರಿಂದ ನವೆಂಬರ್ 16ರಂದು ಶ್ರೀಗಳು ಜೈಲಿನಿಂದ ಬಿಡುಗಡೆಯಾಗಿದ್ದರು.

ಬಿಡುಗಡೆಯಾದ ನಂತರ ದಾವಣೆಗೆರೆಯ ವಿರಕ್ತ ಮಠದಲ್ಲಿ ತಂಗಿದ್ದ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಇಂದು ಬಂಧಿಸಿದ್ದಾರೆ. ಮಠಾಧೀಶರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳಲ್ಲಿ ಒಂದರಲ್ಲಿ ಜಾಮೀನಿಗೆ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದ್ದು, ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ನಿರಾಕರಿಸಿದೆ.

ಎರಡು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಸಮಾನ ಮೊತ್ತಕ್ಕೆ ಇಬ್ಬರ ಶ್ಯೂರಿಟಿಯ ಮೇಲೆ ಅವರಿಗೆ ಜಾಮೀನು ನೀಡಲಾಯಿತು. ಸಾಕ್ಷಿಗಳನ್ನು ಹಾಳು ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ನೀಡಿದರು.

ಮಠಾಧೀಶರು ಮತ್ತು ಇತರ ನಾಲ್ವರ ವಿರುದ್ಧ ಮೈಸೂರಿನ 'ಒಡನಾಡಿ ಸೇವಾ ಸಂಸ್ಥೆ' ಎಂಬ ಎನ್‌ಜಿಒ, ಮಠದ ಶಾಲೆಯಲ್ಲಿ ಓದುತ್ತಿರುವ ಮತ್ತು ಚಿತ್ರದುರ್ಗದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮೊದಲ ದೂರು ದಾಖಲಿಸಿತ್ತು.

ಮೈಸೂರಿನ ನಜರಾಬಾದ್ ಪೊಲೀಸರು ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು.

2019 ಮತ್ತು 2022ರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾಗ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಇತರ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಪೋಕ್ಸೊ ಅಡಿಯಲ್ಲಿ ಎರಡನೇ ಪ್ರಕರಣ ದಾಖಲಾಗಿತ್ತು.

ಕಿರಿಯ ಪೀಠಾಧಿಪತಿ ಬಸವಾದಿತ್ಯ ಹಾಗೂ ಪರಮಶಿವಯ್ಯ, ಗಂಗಾಧರ್, ಮಹಾಲಿಂಗ, ಕರಿಬಸಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ನಂತರ ಎರಡನೇ ಪ್ರಕರಣದಲ್ಲಿ ಪರಮಶಿವಯ್ಯ ಅವರ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿತ್ತು.

SCROLL FOR NEXT