ರಾಜ್ಯ

ವಿದ್ಯುತ್ ಹರಿದು ತಾಯಿ-ಮಗು ಸಾವು ಪ್ರಕರಣ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಸುರೇಶ್ ಕುಮಾರ್ ಕಿಡಿ

Manjula VN

ಬೆಂಗಳೂರು: ವಿದ್ಯುತ್ ಹರಿದು ತಾಯಿ ಮಗು ಸಾವು ಪ್ರಕರಣ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಕರಣ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಅಡಿ ದೂರು ದಾಖಲು ಮಾಡಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಪಾದ ಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ತಾಯಿ ಮತ್ತು ಒಂಬತ್ತು ತಿಂಗಳ ಮಗು ಬೆಂಕಿ ಹೊತ್ತಿಕೊಂಡು ಮೃತ ಪಟ್ಟಿರುವ ಘಟನೆ ಅತ್ಯಂತ ದಾರುಣ. ಇದನ್ನು “ಕೊಲೆ ಪ್ರಕರಣ” ಎಂದೇ ಬಗೆದು ಬೆಸ್ಕಾಂ ನ ಸಂಬಂಧಪಟ್ಟ ಆ ಬೇಜವಬ್ದಾರಿ ಅಧಿಕಾರಿಗಳ ವಿರುದ್ಧ ಕೊಲೆಯ ಆರೋಪದ ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿ ಸೌಂದರ್ಯ ತನ್ನ 9 ತಿಂಗಳ ಮಗಳು ಮತ್ತು ಪತಿ ಸಂತೋಷ್ ಕುಮಾರ್ ಅವರೊಂದಿಗೆ ಬೆಂಗಳೂರಿಗೆ ಮರಳುತ್ತಿದ್ದರು. ಬಸ್ ಇಳಿದು ಮನೆಗೆ ನಡೆದುಕೊಂಡು ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು.

ಪಾದಚಾರಿ ಮಾರ್ಗದ ಮೇಲೆ ತುಂಡಾಗಿ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿಯನ್ನು ತುಳಿದು ಸೌಂದರ್ಯ ಮತ್ತು ಆಕೆಯ ಮಗು ಸಜೀವ ದಹನವಾಗಿದ್ದರು. ಈ ವೇಳೆ ಜೊತೆಯಲ್ಲಿದ್ದ ಅವರ ಪತಿ ಸಂತೋಷ್ ಅವರು ರಕ್ಷಿಸಲು ಯತ್ನಿಸಿದಾಗ ಅವರಿಗೂ ವಿದ್ಯುತ್ ಶಾಕ್ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು.

SCROLL FOR NEXT