ರಾಜ್ಯ

ಬೆಂಗಳೂರು: ಸಾಲ ತೀರಿಸಲು ಎಳನೀರು ಕದಿಯುತ್ತಿದ್ದ ಕ್ಯಾಬ್ ಚಾಲಕನ ಬಂಧನ

Manjula VN

ಬೆಂಗಳೂರು: ಸಾಲ ತೀರಿಸಲು ರಸ್ತೆ ಬದಿಗಳಲ್ಲಿದ್ದ ಎಳನೀರುಗಳನ್ನು ಕದಿಯುತ್ತಿದ್ದ ಕ್ಯಾಬ್ ಚಾಲಕನೊಬ್ಬನನ್ನು ಗಿರಿನಗರ ಠಾಣೆ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ತಮಿಳುನಾಡು ಮೂಲಕ ಮೋಹನ್ ಶಿವಲಿಂಗಾ (30) ಬಂಧಿತ ಆರೋಪಿ. ಈತ ಮಡಿವಾಳದಲ್ಲಿ ವಾಸವಿದ್ದು, ಆರಂಭದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ಇವರು, ನಂತರ ಕ್ಯಾಬ್ ಚಾಲಕನಾಗಿ ವೃತ್ತಿ ಆರಂಭಿಸಿದ್ದ. ಆದರೆ, ಆದಾಯ ಕಡಿಮೆ ಬರುತ್ತಿದ್ದ ಹಿನ್ನಲೆಯಲ್ಲಿ ರಸ್ತೆಬದಿಯಲ್ಲಿ ಇರಿಸಲಾಗುತ್ತಿದ್ದ ಎಳನೀರುಗಳನ್ನು ಕದಿಯಲು ಆರಂಭಿಸಿದ್ದ. ಕದ್ದ ಎಳನೀರನ್ನು ಮಾರಾಟ ಮಾಡುತ್ತಿದ್ದ.

ರಾತ್ರಿ ವೇಳೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿರುತ್ತಿದ್ದ ಎಳನೀರುಗಳನ್ನು ಕ್ಯಾಬ್ ನಲ್ಲಿ ತುಂಬಿಕೊಂಡು ಆರೋಪಿ ಹೋಗುತ್ತಿದ್ದ. ಗಿರಿನಗರದ ಉದ್ಯಾನವನದ ಬಳಿ ಎಳನೀರು ಕಳ್ಳತನವಾಗಿರುವ ಕುರಿತು ಮಾರಾಟಗಾರ ರಾಜಣ್ಣ ಅವರು ದೂರು ನೀಡಿದ್ದರು. 1,150 ಎಳನೀರು ಕಳ್ಳತನವಾಗಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದರು.

 ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದರು. ಇದರಂತೆ ಮೋಹನ್ ನನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯಿಂದ 90 ತೆಂಗಿನಕಾಯಿ, ಸುಮಾರು 8.75 ಲಕ್ಷ ರೂಪಾಯಿ ಮೌಲ್ಯದ ಒಂದು ಬುಲೆಟ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT