ರಾಜ್ಯ

ಕ್ಯಾಪ್ಟನ್ ಎಂವಿ ಪ್ರಾಂಜಲ್ ಹುತಾತ್ಮ: ನಂದನವನದಲ್ಲಿ ನೀರವ ಮೌನ; ಇಂದು ಸಂಜೆ ಬೆಂಗಳೂರಿಗೆ ಪಾರ್ಥೀವ ಶರೀರ

Manjula VN

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರು ಹುತಾತ್ಮರಾಗಿದ್ದು, ಈ ನಡುವಲ್ಲೇ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ನಂದನವನದಲ್ಲಿರುವ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ 66RR ಬೆಟಾಲಿಯನ್ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರು ಹುತಾತ್ಮರಾಗಿದ್ದಾರೆ.

ಪುತ್ರನ ಸಾವಿನಿಂದಾಗಿ ಮನೆಯಲ್ಲಿ ಮಗನನ್ನು ಕಳೆದುಕೊಂಡು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ನೋವಿನಲ್ಲಿದ್ದು, ಅವರನ್ನು ಸಂಬಂಧಿಗಳು ಸಂತೈಸುತ್ತಿದ್ದಾರೆ.

ಇಂದು ಸಂಜೆ ಪ್ರಾಂಜಲ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ MRPL ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಹೀಗಾಗಿ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಕುಟುಂಬ ಸಹಿತ ವೆಂಕಟೇಶ್ ವಾಸವಿದ್ದರು.

ಮಂಗಳೂರು, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್​ ಅನ್ನು ಲೀಡ್ ಮಾಡುತ್ತಿದ್ದರು. ಇತ್ತೀಚೆಗೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದರು.

ಈ ನಡುವೆ ಪ್ರಾಂಜಲ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್'ಡಿ.ಕುಮಾರಸ್ವಾಮಿಯವರು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಅವರು, ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಸೇನಾ  ಕಾರ್ಯಾಚರಣೆಯ ವೇಳೆ ಹುತಾತ್ಮರಾದ ಹೆಮ್ಮೆಯ ಕನ್ನಡಿಗ, ವೀರಯೋಧ ಕ್ಯಾಪ್ಟನ್  ಎಂ.ವಿ.ಪ್ರಾಂಜಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಪ್ರಾಂಜಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

SCROLL FOR NEXT