ರಾಜ್ಯ

ಅನಾಥಾಶ್ರಮದ ವಿರುದ್ಧ ಟೀಕೆ: ಎನ್‌ಸಿಪಿಸಿಆರ್ ಮುಖ್ಯಸ್ಥರ ವಿರುದ್ಧ ಕೇಸ್ ದಾಖಲು

Nagaraja AB

ಬೆಂಗಳೂರು: ದಾರುಲ್ ಉಲೂಮ್ ಸಯೀದಿಯಾ ಯತೀಂಖಾನಾದಲ್ಲಿ (ಅನಾಥಾಶ್ರಮ) ಮಕ್ಕಳು “ಮಧ್ಯಕಾಲೀನ ತಾಲಿಬಾನ್ ಜೀವನ ನಡೆಸುತ್ತಿದ್ದಾರೆ” ಎಂಬ ಹೇಳಿಕೆಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ವಿರುದ್ಧ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾವಲ್ ಬೈರಸಂದ್ರದ ದಾರುಲ್ ಉಲೂಮ್ ಸಯೀದಿಯಾ ಯತೀಂಖಾನ ಕಾರ್ಯದರ್ಶಿ ಅಶ್ರಫ್ ಖಾನ್  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಖಾನ್ ಅವರ ಅನಾಥಾಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕಾನೂಂಗೊ ಯಾವುದೇ ಅನುಮತಿಯನ್ನು ಪಡೆದಿಲ್ಲ.  ಇದಲ್ಲದೆ, ಅನಾಥಾಶ್ರಮದಲ್ಲಿ ಮಕ್ಕಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಹೇಳಿದ್ದಾರೆ. ಸಮುದಾಯಗಳ ನಡುವೆ ಬಿರುಕು ಮೂಡಿಸಲು ಕಾನೂಂಗೊ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ಅಶ್ರಫ್ ಖಾನ್ ಆರೋಪಿಸಿದ್ದಾರೆ.

ಆರಂಭದಲ್ಲಿ ಅನಾಥಾಶ್ರಮದ ಸೌಲಭ್ಯಗಳಿಗಾಗಿ ಶ್ಲಾಘಿಸಿ, ಅದರ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದ ಕಾನೂಂಗೊ ತದನಂತರ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ನಿರಾಶಾದಾಯಕ ಕಾಮೆಂಟ್‌ಗಳನ್ನು ಮಾಡಿದ್ದರು.

ನವೆಂಬರ್ 19 ರಂದು ಎನ್‌ಸಿಪಿಸಿಆರ್‌ನ ಕೆಲವು ಸದಸ್ಯರೊಂದಿಗೆ ಅನಾಥಾಶ್ರಮಕ್ಕೆ ಭೇಟಿ ಪರಿಶೀಲಿಸಿದ ಕಾನೊಂಗೊ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಅನಾಥಾಶ್ರಮ ನೋಂದಾಯಿತ ಸಂಸ್ಥೆ ಅಲ್ಲ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಹೊಂದಿದೆ ಎಂದು ಹೇಳಿದೆ.

ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆಯಡಿ ಅನಾಥಾಶ್ರಮದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಯೋಗ ಒತ್ತಾಯಿಸಿದೆ. ಜಿಲ್ಲಾಧಿಕಾರಿ ದಯಾನಂದ ಕೆಎ ಅವರಿಗೆ ಪತ್ರದ ಪ್ರತಿಯನ್ನು ಹಸ್ತಾಂತರಿಸಿರುವ ಆಯೋಗ, ಅನಾಥಾಶ್ರಮದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದೆ. 

SCROLL FOR NEXT