ರಾಜ್ಯ

ರೈತರಂತೆ ಫೋಸ್ ಕೊಟ್ಟು ರೈತರ ನಿತ್ಯ ಬದುಕಿನ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡ ಜೋಡಿ: ಹಲವರಿಂದ ಮೆಚ್ಚುಗೆ

Sumana Upadhyaya

ಚಾಮರಾಜನಗರ: ಪ್ರಿ ವೆಡ್ಡಿಂಗ್ ಶೂಟ್ ಇತ್ತೀಚೆಗೆ ಬಹಳ ಜನಪ್ರಿಯ. ಮದುವೆಗೆ ಕೆಲ ದಿನಗಳ ಮೊದಲು ಜೋಡಿ ಖ್ಯಾತ ರಮಣೀಯ ಸ್ಥಳಗಳು, ಪ್ರವಾಸಿ ಕೇಂದ್ರಗಳು, ವಿದೇಶಿ ತಾಣಗಳಿಗೆ ಹೋಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. 

ಚಾಮರಾಜನಗರದ ಈ ಜೋಡಿ ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ(Pre wedding photoshoot) ವಿಶಿಷ್ಟ ರೀತಿಯಲ್ಲಿ ರೈತ ದಂಪತಿಗಳಂತೆ ಪೋಸು ನೀಡಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ರೈತ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ, ರೈತರ ಸಮಸ್ಯೆ ಹತ್ತಾರು, ಅವರ ಸಮಸ್ಯೆ ಕೇಳುವವರಿಲ್ಲ ಎಂಬ ಮಾತನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. 

ಇಂತಹ ಸಂದರ್ಭದಲ್ಲಿ ಹಳ್ಳಿಯ ರೈತರ ಬದುಕು, ಜೀವನಶೈಲಿಯನ್ನು ಫೋಟೋಶೂಟ್ ನಲ್ಲಿ ತಂದಿದ್ದಾರೆ. ಈ ಪ್ರಿವೆಡ್ಡಿಂಗ್ ಶೂಟ್ ನೋಡಿದವರು ಈ ರೀತಿ ಹಳ್ಳಿ ಜೀವನಕ್ಕೆ ಇಂದಿನ ಯುವಜನತೆ ಹೊಂದಿಕೊಂಡರೆ ಎಷ್ಟು ಒಳ್ಳೆಯದು ಎನ್ನುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಂಗಲ ಗ್ರಾಮದ ಅಭಿಲಾಷ್ ಹಾಗೂ ಚನ್ನಪಟ್ಟಣದ ಕೃತಿಕಾ ಮೊನ್ನೆ ನವೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ಮದುವೆಯ ಪ್ರಿವೆಡ್ಡಿಂಗ್ ವೀಡಿಯೊವು ಸಾಂಪ್ರದಾಯಿಕ ಗ್ರಾಮೀಣ ವಾತಾವರಣದಲ್ಲಿ, ಭೂಮಿಯನ್ನು ಉಳುಮೆ ಮಾಡುವುದು, ಎತ್ತಿನ ಬಂಡಿಯಲ್ಲಿ ಸವಾರಿ ಮಾಡುವುದು, ಜಮೀನಿನಲ್ಲಿ ರಾಗಿ ಮುದ್ದೆ ಮತ್ತು ಉಪ್ಪುಸಾರು ತಿನ್ನುವುದನ್ನು ತೋರಿಸಿದ್ದಾರೆ.

ಇತ್ತೀಚೆಗೆ ಯುವಜನತೆ ಮದುವೆ ಸಂದರ್ಭದಲ್ಲಿ ಪ್ರಿವೆಡ್ಡಿಂಗ್ ಫೋಟೋಶೂಟ್ ಗೆ ರಮಣೀಯ ಸ್ಥಳಗಳು, ರೆಸಾರ್ಟ್ ಗಳಿಗೆ ಆದ್ಯತೆ ನೀಡಿದರೆ, ಅಭಿಲಾಷ್ ಮತ್ತು ಕೃತಿಕಾ ಅವರು ಆಯ್ಕೆ ಮಾಡಿಕೊಂಡಿರುವ ಗ್ರಾಮೀಣ ಜೀವನಶೈಲಿಯು ಕೃಷಿ ಕುಟುಂಬಗಳು ಇತರರಿಗಿಂತ ಕಡಿಮೆಯಿಲ್ಲ ಎಂದು ಎತ್ತಿ ತೋರಿಸಿದ್ದಕ್ಕಾಗಿ ದಂಪತಿಯನ್ನು ಅನೇಕರು ಶ್ಲಾಘಿಸಿದ್ದಾರೆ.

SCROLL FOR NEXT