ರಾಜ್ಯ

ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು, ಇಬ್ಬರು ಪ್ರಾಣಾಪಾಯದಿಂದ ಪಾರು

Ramyashree GN

ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯೆಯಲ್ಲೇ ಎಲೆಕ್ಟ್ರಿಕ್ ಕಾರು ಹೊತ್ತು ಉರಿದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾಲ್ಮಿಯಾ ವೃತ್ತದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಇಬ್ಬರು ಸ್ನೇಹಿತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು. ಅಷ್ಟರಲ್ಲೇ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹತ್ತಿಕೊಂಡಿತು. ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಸರಿಯಾದ ಸಮಯಕ್ಕೆ ಜಿಗಿದು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ರಾಕೇಶ್​ ಪ್ರಕಾಶ್​ ಎನ್ನುವವರು ತಮ್ಮ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಜೆಪಿ ನಗರದ ದಾಲ್ಮಿಯಾ ವೃತ್ತದ ಬಳಿ ಎಲೆಕ್ಟ್ರಾನಿಕ್​ ಕಾರು ಬೆಂಕಿಗೆ ಆಹುತಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಬರೆದುಕೊಂಡಿದ್ದಾರೆ.

ಕ್ಷಣಾರ್ಧದಲ್ಲಿ ವಾಹನ ಸುಟ್ಟು ಕರಕಲಾಗಿದ್ದು, ನೋಡುಗರು ಹಾಗೂ ಪ್ರಯಾಣಿಕರು ಬೆಚ್ಚಿಬಿದ್ದಾರೆ.

ಕಾರಿನಲ್ಲಿ ಬೆಲೆಬಾಳುವ ವಸ್ತುಗಳಿದ್ದು, ಅವುಗಳು ಕೂಡ ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

SCROLL FOR NEXT