ರಾಜ್ಯ

ಬಳ್ಳಾರಿಯಲ್ಲಿ ಸಿ-ಕೆಟಗರಿ ಗಣಿಗಾರಿಕೆಗೆ ಎಫ್ಎಸಿ ಒಪ್ಪಿಗೆ; ಪರಿಸರ, ಹಳ್ಳಿ ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಆತಂಕ!

Ramyashree GN

ಬಳ್ಳಾರಿ: ಬಳ್ಳಾರಿ ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳ ಗಣಿಗಳನ್ನು ಸಿ- ಕೆಟಗರಿ ಗಣಿಗಾರಿಕೆಗೆ ಗುತ್ತಿಗೆ ನೀಡಲು ಕೇಂದ್ರ ಅರಣ್ಯ ಸಲಹಾ ಸಮಿತಿ (ಎಫ್‌ಎಸಿ) ಹಸಿರು ನಿಶಾನೆ ತೋರಿದೆ. ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅರಣ್ಯ ನಾಶ, ಅನಾರೋಗ್ಯ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕಾರ್ಯಕರ್ತರು ಆತಂಕಗೊಂಡಿದ್ದಾರೆ.

ಇತ್ತೀಚೆಗೆ, ರಾಜ್ಯದಲ್ಲಿ ಎಫ್‌ಎಸಿ 51 ಸಿ-ಕೆಟಗರಿ ಗಣಿಗಾರಿಕೆಗೆ ಅನುಮತಿ ನೀಡಿತು. ಇದರಲ್ಲಿ ಬಳ್ಳಾರಿ ಅತಿ ಹೆಚ್ಚು ಗುತ್ತಿಗೆ ಪಡೆದಿದೆ. ಸದ್ಯ, ಸಂಡೂರು ಗಣಿಗಾರಿಕೆ ಪ್ರದೇಶದಲ್ಲಿ ಸುಮಾರು 35 ಎಂಎಂಟಿ ಮೌಲ್ಯದ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ ಮತ್ತು 12ಕ್ಕೂ ಹೆಚ್ಚು ಗಣಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಈ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳ ಹೆಚ್ಚಳವು ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಎಎಸ್ಐ-ರಕ್ಷಿತ ಸ್ಮಾರಕಗಳನ್ನು ಹಾನಿಗೊಳಿಸಬಹುದು ಎಂದು ಪರಿಸರ ಕಾರ್ಯಕರ್ತರು ಎಚ್ಚರಿಸಿದ್ದಾರೆ. ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದಕ್ಕಿಂತಲೂ ಆದಾಯದ ಬಗ್ಗೆಯೇ ಸರ್ಕಾರವು ಹೆಚ್ಚು ಕಾಳಜಿ ವಹಿಸುತ್ತಿದೆ ಎಂದು ಆರೋಪಿಸಿದರು.

ಸಂಡೂರು ತಾಲೂಕಿನ ಹೋರಾಟಗಾರ ಶ್ರೀಶೈಲ್ ಆಲದಹಳ್ಳಿ ಮಾತನಾಡಿ, ಮೂರು ಜಿಲ್ಲೆಗಳಲ್ಲಿ (ಚಿತ್ರದುರ್ಗ ಮತ್ತು ತುಮಕೂರು ಸೇರಿದಂತೆ) ಸಿ-ಕೆಟಗರಿ ಗಣಿಗಾರಿಕೆಗೆ ಎಫ್‌ಎಸಿ ಅನುಮತಿ ನೀಡಿದ ನಂತರ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೇ ಗಣಿಗಾರಿಕೆ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಸುಮಾರು 40 ಎಂಎಂಟಿ ಗಣಿಗಾರಿಕೆ ನಡೆಯುತ್ತದೆ. ಸುಮಾರು 30 ಸಿ-ಕೆಟಗರಿ ಗುತ್ತಿಗೆಗಳು ಕಾರ್ಯಾಚರಣೆಯಲ್ಲಿವೆ. 'ಕೆಲವು ವರ್ಷಗಳ ಹಿಂದೆ, ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಎಎಸ್‌ಐ-ರಕ್ಷಿತ ದೇವಾಲಯವು ಗಣಿಗಾರಿಕೆಯಿಂದ ಹಾನಿಗೊಳಗಾಗಿತ್ತು. 15ಕ್ಕೂ ಹೆಚ್ಚು ಹಳ್ಳಿಗಳು ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿವೆ' ಎಂದರು.

ಗಣಿಗಾರಿಕೆಯಿಂದಾಗಿ ಹಳ್ಳಿಗರ ಆರೋಗ್ಯದ ಕ್ಷೀಣತೆ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ಸರ್ಕಾರದ ಒಟ್ಟಾರೆ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯದ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಅವರು ಹೇಳಿದರು.

SCROLL FOR NEXT