ಮಂಗಳೂರು: ಸರ್ಕಾರದ ಯೋಜನೆಗಳು ಮತ್ತು ಸಾಲ ಪಡೆಯಲು ಆಧಾರ್, ಪ್ಯಾನ್ ಮತ್ತು ವೋಟರ್ ಐಡಿಗಳಂತಹ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬರ್ನಾಡ್ ಬಜ್ಜೋಡಿ ಬಿಕರ್ನಕಟ್ಟೆ ನಿವಾಸಿ ರೋಶನ್ ಮಸ್ಕರೇನಸ್ (41) ಬಂಧಿತ ಆರೋಪಿ.
‘ಹೆಲ್ಪ್‌ಲೈನ್ ಮಂಗಳೂರು’ ಎಂಬ ಸಂಸ್ಥೆ ನಡೆಸುತ್ತಿದ್ದ ಆರೋಪಿ ಕಳೆದ 3 ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಆಧಾರ್ ಪರಿಶೀಲನೆಯ ಸಮಯದಲ್ಲಿ ಅವರು ಈ ಹಿಂದೆ ಬಳಸಿದ್ದ ರೇಷನ್ ಕಾರ್ಡ್ ಮಾಹಿತಿ ಡೌನ್‌ಲೋಡ್ ಮಾಡಲು ಗ್ರಾಮೀಣ ಸೇವಾ ಕೇಂದ್ರದ ವೆಬ್‌ಸೈಟ್ ಅನ್ನು ಬಳಸಿದ್ದಾರೆ ಮತ್ತು ಆಧಾರ್ ವಿವರಗಳನ್ನು ಎಡಿಟ್ ಮಾಡಲು ಪಿಡಿಎಫ್ ಎಡಿಟರ್ ಬಳಸಿದ್ದಾರೆ ಎಂದು ಆಯುಕ್ತರು ಹೇಳಿದ್ದಾರೆ.
''ನಕಲಿ ದಾಖಲೆ ತಯಾರಿಸಲು ಅಂಗಡಿಯೊಂದು 500 ರಿಂದ 20,000 ರೂ.ವರೆಗೆ ವಸೂಲಿ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕ ನಂತರ ಶುಕ್ರವಾರ ದಾಳಿ ನಡೆಸಲಾಯಿತು.ಆರೋಪಿ ನಕಲಿ ಆಧಾರ್, ಪಡಿತರ ಚೀಟಿ, ಮಾರ್ಕ್ಸ್ ಕಾರ್ಡ್, ಟ್ರೇಡ್ ಲೈಸೆನ್ಸ್, ಜನನ ಪ್ರಮಾಣ ಪತ್ರ ಮತ್ತಿತರ ದಾಖಲೆ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದಾನೆ. ಆತನಿಂದ ನಕಲಿ ದಾಖಲೆಗಳನ್ನು ಪಡೆದ ಹಲವಾರು ಜನರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಬಳಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಆರೋಪಿಯಿಂದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಬಯೋಮೆಟ್ರಿಕ್ ಮತ್ತಿತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 465 (ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿಯಾಗಿ ಬಳಸುವುದು) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.