ರಾಜ್ಯ

ಮಾಗಡಿಯ ಐತಿಹಾಸಿಕ ಕೆಂಪೇಗೌಡರ ಕೋಟೆ ರಕ್ಷಣೆಗೆ ಸರ್ಕಾರ ಬದ್ಧ: ಡಿಸಿಎಂ ಡಿಕೆ ಶಿವಕುಮಾರ್

Nagaraja AB

ರಾಮನಗರ: ಐತಿಹಾಸಿಕ ಪುಣ್ಯಭೂಮಿ ಮಾಗಡಿಯನ್ನು ಪವಿತ್ರ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲು  ರಾಜ್ಯ ಸರ್ಕಾರ ಬದ್ಧವಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 

ಮಾಗಡಿಯ ಕೆಂಪಾಪುರ ಗ್ರಾಮದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಗೆ ಗೌರವ ನಮನ ಅರ್ಪಿಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರು ಐದು ಶತಮಾನಗಳ ಹಿಂದೆ ಕಟ್ಟಿದ ಬೆಂಗಳೂರೆಂಬ ಕನಸಿನ ನಗರಿ ಇಂದು ಜಾಗತಿಕವಾಗಿ ಗುರುತಿಸಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆ. ಮಾಗಡಿ ಮೂವರು ಮಹಾಪುರುಷರಿಗೆ ಜನ್ಮನೀಡಿರುವ ಪುಣ್ಯಭೂಮಿ. ಮಾಗಡಿಯಲ್ಲಿ ಕೆಂಪೇಗೌಡರು, ವೀರಾಪುರದಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳು, ಬಾನಂದೂರು ಗ್ರಾಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳು ಜನಿಸಿದ ಪವಿತ್ರ ಸ್ಥಳ ಮಾಗಡಿಯನ್ನು ಪವಿತ್ರ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಈ ಹಿಂದೆ ಕೆಂಪೇಗೌಡರ ಪ್ರಾಧಿಕಾರವನ್ನು ಅಭಿವೃದ್ಧಿ ಮಾಡುವ ಮೂಲಕ ಬದಲಾವಣೆ ತರುತ್ತೇವೆ. ಕೆಂಪೇಗೌಡರು ಈ ದೇಶದ ಆಸ್ತಿ. ಕೆಂಪೇಗೌಡರ ಐಕ್ಯ ಸ್ಥಳ, ಕೆಂಪೇಗೌಡರು ನಿರ್ಮಿಸಿದ ಕೋಟೆಯನ್ನು ಅಭಿವೃದ್ಧಿಪಡಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು. 

ಮಾಗಡಿಯ ಕೋಟಗೆ  ಭೇಟಿ ನೀಡಿ ಪರಿಶೀಲಿಸಿದ ಅವರು, ಕೆಂಪೇಗೌಡರ ಪರಂಪರೆಯ ಕುರುಹುಗಳನ್ನು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಕೋಟೆ ರಕ್ಷಣೆಯಿಂದ ಹಿಡಿದು ಅವರ ಆಳ್ವಿಕೆಯ ಪ್ರತಿ ಕುರುಹುಗಳನ್ನು ಐತಿಹಾಸಿಕ ಮಹತ್ವದೊಂದಿಗೆ ಸಂರಕ್ಷಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದರು. ಶಾಸಕ ಹೆಚ್. ಸಿ. ಬಾಲಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ನಂತರ ಬೆಂಗಳೂರು ನಗರಕ್ಕೆ ಜೀವಸೆಲೆಯಾಗಿರುವ ತಿಪ್ಪಗೊಂಡನಹಳ್ಳಿಯ ಚಾಮರಾಜಸಾಗರ ಜಲಾಶಯ ವೀಕ್ಷಿಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
 

SCROLL FOR NEXT