ಗದಗ: ಹುಡುಗಿಯನ್ನು ಮದುವೆ ಮಾಡಿ ಕೊಡುವಾಗ ಮನೆಯವರು, ಹೆಣ್ಣಿನ ಹೆತ್ತವರು ಮುಖ್ಯವಾಗಿ ಹುಡುಗನ ಆರ್ಥಿಕ ಭದ್ರತೆ ಬಗ್ಗೆ ವಿಚಾರ ಮಾಡುತ್ತಾರೆ. ಆರ್ಥಿಕವಾಗಿ ಸಬಲರಾಗಿಲ್ಲದಿದ್ದರೆ ಮಗಳನ್ನು ಕೊಡಲು ತಂದೆ-ತಾಯಿ ಹಿಂದೇಟು ಹಾಕುತ್ತಾರೆ.
ಗದಗ ಜಿಲ್ಲೆಯಲ್ಲಿ ಇದೇ ವಿಷಯಕ್ಕೆ ಕೃಷಿ ಕೆಲಸದಲ್ಲಿ ತೊಡಗಿರುವ ಯುವಕರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಆರ್ಥಿಕ ಅಭದ್ರತೆಯಿಂದಾಗಿ ಬಹುತೇಕ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಕೃಷಿಕರಿಗೆ ಮದುವೆ ಮಾಡಿ ಕೊಡಲು ಹಿಂದೇಟು ಹಾಕುತ್ತಿದ್ದು, ಗದಗ ಜಿಲ್ಲೆಯ ರೈತರು ಮದುವೆಯಾಗುವುದು ಕಷ್ಟವಾಗಿದೆ.
ಈ ಪ್ರದೇಶದಲ್ಲಿ ಇದು ಹೊಸ ವಿಷಯವಲ್ಲವಾದರೂ, ಮೊನ್ನೆ ಶುಕ್ರವಾರ ಗದಗ ಗ್ರಾಮಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಈ ಸಮಸ್ಯೆ ಪ್ರಸ್ತಾಪವಾಗಿದೆ. ಗೊಜನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲದ ಕಾರಣ ಕೆಲವೇ ಕೆಲವು ಮದುವೆಗಳು ನಡೆದಿವೆ ಎಂದು ರೈತರು ಬರ ಅಧ್ಯಯನ ತಂಡಕ್ಕೆ ತಿಳಿಸಿದರು.
ಇದನ್ನೂ ಓದಿ: ಜಾನುವಾರುಗಳಿಗೂ ತಟ್ಟಿದ ಬರದ ಬಿಸಿ: ದುಪ್ಪಟ್ಟು ಬೆಲೆ ತೆತ್ತು ಆಂಧ್ರಪ್ರದೇಶದಿಂದ ಮೇವು ಖರೀದಿಸುತ್ತಿರುವ ರೈತರು!
ಹವಾಮಾನ ವೈಪರೀತ್ಯದಿಂದ ಹಲವು ವರ್ಷಗಳಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ರೈತರು ತಮ್ಮ ಹೆಣ್ಣು ಮಕ್ಕಳನ್ನು ರೈತರಿಗೆ ಮದುವೆ ಮಾಡಿ ಕೊಡುತ್ತಿಲ್ಲ. ಕೆಲವು ರೈತರು ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದುಕೊಂಡಿಲ್ಲ, ಇನ್ನು ಕೆಲವರು ವಲಸೆ ಹೋಗುವ ಯೋಜನೆ ಇದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ, ಯುವಕರ ಕೃಷಿ ಹಿನ್ನೆಲೆಯಿಂದಾಗಿ ಬಹುತೇಕ ಎಲ್ಲಾ ಮದುವೆಯ ಪ್ರಸ್ತಾಪಗಳನ್ನು ರದ್ದುಗೊಂಡಿವೆ. ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ ಬಹುತೇಕ ಗ್ರಾಮಗಳಲ್ಲಿ ಇದೇ ಸ್ಥಿತಿ ಇದೆ. ಗಜೇಂದ್ರಗಡ ತಾಲೂಕುಗಳಲ್ಲಿ ಗೊಜನೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ರೈತರು ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತವಾಗಿ ನಷ್ಟ ಅನುಭವಿಸಿದ್ದಾರೆ.
ಕಳೆದ ವಾರ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಿದ್ದ ರೈತನ ತಾಯಿಯೊಬ್ಬರು, ಹುಡುಗಿಯ ಪೋಷಕರು ತನ್ನ ಮಗನಿಗೆ ಕೆಲಸ ಹುಡುಕಲು ಹೇಳುವಂತೆ ಕೇಳಿದರು. ನಂತರವೇ ಅವರು ಮದುವೆಗೆ ಸಿದ್ಧರಾಗುತ್ತಾರೆ ಎನ್ನುತ್ತಾರೆ ಎಂದು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು.