ರಾಜ್ಯ

ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಹಲ್ಲೆ, ದರೋಡೆ ಪ್ರಕರಣ: ಪೊಲೀಸರಿಂದ ಆಟೋ ಚಾಲಕನ ಪತ್ತೆ, ಶೀಘ್ರದಲ್ಲೇ ಬಂಧನ

Manjula VN

ಬೆಂಗಳೂರು: ಶ್ರವಣದೋಷವುಳ್ಳ ವ್ಯಕ್ತಿಯ ಅಮಾನುಷವಾಗಿ ಹಲ್ಲೆ ನಡೆಸಿ, ದರೋಡೆ ಮಾಡಿದ್ದ ಆಟೋ ಚಾಲಕನನ್ನು ಸುಬ್ರಹ್ಮಣ್ಯನಗರ ಪೊಲೀಸರು ಪತ್ತೆಹಚ್ಚಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸುವುದಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಬಳಿ ಘಟನೆ ನಡೆದಿತ್ತು. ಹಲ್ಲೆಗೊಳಗಾಗಿದ್ದ ಜಿತೇಂದ್ರ ಬಿ ಶಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಐಸಿಯುವಿನಿಂದ ವಾರ್ಡ್'ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಯಾಗಿದಿ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಬಳಿ ಇದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಇದರಂತೆ ಆಟೋ ಚಾಲಕನ ನೋಂದಣಿ ಸಂಖ್ಯೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯ ಗುರುತನ್ನೂ ಪತ್ತೆ ಮಾಡಿದ್ದಾರೆ.

ಆರೋಪಿಯನ್ನು ಗುರ್ತಿಸಲಾಗಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಸೈದುಲು ಅದಾವತ್ ಅವರು ಹೇಳಿದ್ದಾರೆ.

ಸಂತ್ರಸ್ತ ವ್ಯಕ್ತಿ ಆನ್‌ಲೈನ್ ಬಸ್ ಟಿಕೆಟಿಂಗ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಗುರುವಾರ ಬೆಳಿಗ್ಗೆ 9.30ರ ಸುಮಾರಿಗೆ ಆಟೋರಿಕ್ಷಾವನ್ನು ಮೆಜೆಸ್ಟಿಕ್‌ನಿಂದ 2 ನೇ ಮೇನ್, ಗೊರಗುಂಟೆಪಾಳ್ಯದ ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಬುಕ್ ಮಾಡಿದ್ದರು.

ಸಂತ್ರಸ್ತ ವ್ಯಕ್ತಿ ಜಿತೇಂದ್ರ ಅವರು ಆಟೋ ಹತ್ತಿದ ಬಳಿಕ ಸುಬ್ರಹ್ಮಣ್ಯನಗರ ಪೊಲೀಸ್‌ ವ್ಯಾಪ್ತಿಯ ಯಶವಂತಪುರದ ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಬಳಿ ಆಟೋಗೆ ಗ್ಯಾಸ್ ತುಂಬಿಸಿದ ಚಾಲಕ, ನಂತರ ಜಿತೇಂದ್ರ ಅವರ ಬಳಿ ಹಣ ಕೇಳಿದ್ದ. ಈ ವೇಳೆ ಜಿತೇಂದ್ರ ಅವರು ಪಾಕೆಟ್ ತೆಗೆದು ಹಣ ನೀಡಿದ್ದಾರೆ. ಇದೇ ವೇಳೆ ಪಾಕೆಟ್ ನಲ್ಲಿ ಹೆಚ್ಚಿನ ಹಣ ಇರುವುದನ್ನು ನೋಡಿರುವ ಚಾಲಕ ಕೆಲ ನಿಮಿಷಗಳ ಬಳಿಕ ಜಿತೇಂದ್ರ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಪಾಕೆಟ್, ಮೊಬೈಲ್ ಫೋನ್ ಹಾಗೂ ಶ್ರವಣ ಸಾಧನವನ್ನು ಕಸಿದುಕೊಂಡಿದ್ದಾನೆ. ನಂತರ ರಿಕ್ಷಾವನ್ನು ಒರಾಯನ್ ಮಾಲ್'ಗೆ ಹೋಗುವ ರಸ್ತೆಯ ಕಡೆಗೆ ತಿರುಗಿಸಿ, ವಾಹನ ಚಲಿಸುತ್ತಿರುವಾಗಲೇ ಜಿತೇಂದ್ರ ಅವರನ್ನು ಹೊರಗೆ ತಳ್ಳಿದ್ದ.

ಚಲಿಸುತ್ತಿದ್ದ ಟೋರಿಕ್ಷಾದಿಂದ ಕೆಳಗೆ ಬಿದ್ದ ಪರಿಣಾಮ ಜಿತೇಂದ್ರ ಅವರಿಗೆ ತೀವ್ರತರ ಗಾಯಗಳಾಗಿತ್ತು. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಜಿತೇಂದ್ರ ಅವರನ್ನು ದಾರಿಹೋಕರು ರಕ್ಷಣೆ ಮಾಡಿ, 108 ಆ್ಯಂಬುಲೆನ್ಸ್'ಗೆ ಕರೆ ಮಾಡಿದ್ದಾರೆ. ನಂತರ ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಿದ್ದರು.

SCROLL FOR NEXT