ರಾಜ್ಯ

ಕೊಡಗು: ಬುಡಕಟ್ಟು ಆಶ್ರಮ ಶಾಲೆಯ ಆಹಾರ ಧಾನ್ಯಗಳಲ್ಲಿ ಹುಳುಗಳು ಪತ್ತೆ, ಅಧಿಕಾರಿಗಳ ವಿರುದ್ಧ ಪೋಷಕರ ಕಿಡಿ

Manjula VN

ಮಡಿಕೇರಿ: ಕೊಡಗು ಬುಡಕಟ್ಟು ಆಶ್ರಮ ಶಾಲೆಯ ಆಹಾರ ಧಾನ್ಯಗಳಲ್ಲಿ ರಾಶಿ ರಾಶಿ ಹುಳುಗಳು ಪತ್ತೆಯಾಗಿದ್ದು, ಇದನ್ನು ಕಂಡ ಮಕ್ಕಳ ಪೋಷಕರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಜಿ.ಪಂ ವ್ಯಾಪ್ತಿಯ ದಿಡ್ಡಳ್ಳಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆಹಾರಧಾನ್ಯಗಳಲ್ಲಿ ರಾಶಿ ರಾಶಿ ಹುಳುಗಳು ಪತ್ತೆಯಾಗಿದೆ.ಆಹಾರ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಶಾಲೆಗೆ ಅಕ್ಕಿ, ಗೋಧಿ ಮತ್ತಿತರ ಆಹಾರಧಾನ್ಯಗಳನ್ನು ಗುತ್ತಿಗೆದಾರರು ಪೂರೈಕೆ ಮಾಡುತ್ತಾರೆ.

ಈ ಧಾನ್ಯಗಳಲ್ಲಿ ಹುಳುಗಳು ಪತ್ತೆಯಾಗಿದ್ದು, ಗುತ್ತಿಗೆದಾರರು ಕಳಪೆ ಗುಣಮಟ್ಟದ ಧಾನ್ಯಗಳನ್ನು ವಿತರಿಸುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.

ಕೆಲ ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದರ ಬೆನ್ನಲ್ಲೇ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗಿರಿಜನ ಮುಖಂಡ ಜೆ.ಕೆ.ಅಪ್ಪಾಜಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದ್ದು, ಆಹಾರ ಧಾನ್ಯಗಳಲ್ಲಿ ಹುಳುಗಳಿರುವುದು ಪತ್ತೆಯಾಗಿದೆ. ಅಲ್ಲದೆ, ಗೋಡೆಗಳ ಮೇಲೆ ಜೀರುಂಡೆಗಳ ರಾಶಿ ಕೂಡ ಕಂಡು ಬಂದಿದೆ.

ಕೂಡಲೇ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಗುತ್ತಿಗೆದಾರರಿಗೆ ಎಚ್ಚರಿಗೆ ನೀಡಿದ್ದಾರೆ.

ಸ್ಥಳಕ್ಕೆ ಬಂದ ಸಮಗ್ರ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ಹೊನ್ನೇಗೌಡ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಗುಣಮಟ್ಟದ ಆಹಾರಧಾನ್ಯ ವಿತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಮಾಲ್ದಾರೆ ಜಿ.ಪಂ.ಮಾಜಿ ಸದಸ್ಯೆ ಹಾಗೂ ಗಿರಿಜನ ಮುಖಂಡರಾದ ಇಂದಿರಾ ಮಾತನಾಡಿ, ಗಿರಿಜನ ಮಕ್ಕಳ ಶಿಕ್ಷಣಕ್ಕಾಗಿ ಆಶ್ರಮ ಶಾಲೆಯನ್ನು ತೆರೆಯಲಾಗಿದೆ. ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದೆ, ಹುಳುಗಳು ತುಂಬಿರುವ ಆಹಾರವನ್ನು ನೀಡುತ್ತಿರುವುದು ಸರಿಯಲ್ಲ. ಈ ಕುರಿತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ತಿಂಗಳಿಗೊಮ್ಮೆ ಶಾಲೆಗೆ ಭೇಟಿ ನೀಡಿ, ಆಹಾರ ಪದಾರ್ಥಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT