ರಾಜ್ಯ

ರೈತ ಮುಖಂಡರಿಂದ ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ

Manjula VN

ಬೆಂಗಳೂರು: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ಅವರನ್ನು ಸೋಮವಾರ ರಾಜ್ಯದ ರೈತ ಮುಖಂಡರು ಭೇಟಿ ಮಾಡಿದ್ದು, ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು.

ಈ ವೇಳೆ ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ರೈತರ ನಿಯೋಗದ ನೇತೃತ್ವ ವಹಿಸಿದ್ದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ಕೇಂದ್ರ ಜಲಶಕ್ತಿ ಸಚಿವರು ಹಾಗೂ ಸಿಡಬ್ಲ್ಯುಎಂಎ ಅಧ್ಯಕ್ಷರಿಗೆ ವಿವರಿಸಿದ್ದೇವೆ. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದೇವೆ. ಕಾವೇರಿ ಜಲಾನಯನ ಪ್ರದೇಶದ ರಾಜ್ಯ ರೈತರು ಸಂಕಷ್ಟದಲ್ಲಿದ್ದಾರೆ, ಅಲ್ಲದೆ, ಕುಡಿಯುವ ನೀರಿಗಾಗಿ ಕಾವೇರಿಯನ್ನೇ ಅವಲಂಬಿಸಿರುವ ಬೆಂಗಳೂರು ನಗರದ 1.3 ಕೋಟಿ ನಿವಾಸಿಗಳು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆಂದು ವಿವರಿಸಿದ್ದೇವೆಂದು ಹೇಳಿದರು.

ಕರ್ನಾಟಕದ ಜನರು 25 ಜನ ಬಿಜೆಪಿ ಎಂಪಿಗಳನ್ನ ಆಯ್ಕೆ ಮಾಡಿದ್ದರೂ ನಮಗೆ ಅನ್ಯಾಯವಾಗುತ್ತಿದೆ. ರಾಜ್ಯದ ರೈತರ ಬಲಿಕೊಡುವಂತಾಗಿದೆ. ರೈತರು ವಲಸೆ ಹೋಗುತ್ತಿದ್ದಾರೆ.  ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ಕುಡಿಯವ ನೀರು ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ  ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಅವೈಜ್ಞಾನಿಕ ಆದೇಶ ತಡೆಯಾಗಬೇಕು ಎಂದು ಒತ್ತಾಯಿಸಲಾಯಿತು.  ಕುಡಿಯುವ ನೀರಿಗಾಗಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಆಚರಿಸಿ ಜನಸಾಮಾನ್ಯರು ಬೀದಿಗೆ ಬಂದಿದ್ದಾರೆ ಇದನ್ನು ಗಮನಿಸಬೇಕು ಎಂದು ತಿಳಿಸಿದರು.

ವಿವಾದ ಸಂಬಂಧ ಜಲಶಕ್ತಿ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹಂಚಿಕೆಯಾಗಿರುವ ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಬೇಕು ಮತ್ತು ಕಾವೇರಿ ಜಲಾನಯನ ಪ್ರದೇಶದ ಬಿಕ್ಕಟ್ಟನ್ನು ತಕ್ಷಣದ ಆಧಾರದ ಮೇಲೆ ನಿರ್ಣಯಿಸಲು ಮತ್ತು ಸಮರ್ಥನೀಯ ಸಂಕಷ್ಟ ಸೂತ್ರವನ್ನು ಜಾರಿಗೆ ತರಲು ತಜ್ಞರ ತಂಡವನ್ನು ರಚಿಸಬೇಕು. ಕಾವೇರಿ ಜಲಾನಯನ ಪ್ರದೇಶದ ಬರ ಪರಿಸ್ಥಿತಿಯನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆಯಿಂದ 65 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಬರಗಾಲದ ವರ್ಷಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
 
ಸಮೃದ್ಧ ಮಳೆಗೆ ನಮಗೆ ಸಹಾಯ ಮಾಡುವ ಪಶ್ಚಿಮ ಘಟ್ಟಗಳಲ್ಲಿನ ಕಾಡುಗಳನ್ನು ಸಂರಕ್ಷಿಸುವ ಮತ್ತು ನಿರ್ವಹಿಸುವ ಸಂಪೂರ್ಣ ಹೊರೆಯನ್ನು ಕರ್ನಾಟಕ ಹೊತ್ತಿದೆ. ತನ್ನ ಪಾಲಿನ ನೀರನ್ನು ಕೇಳುವ ತಮಿಳುನಾಡು ಸರ್ಕಾರ, ಕರ್ನಾಟಕದ ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವರ್ಷಕ್ಕೆ ಕನಿಷ್ಠ 2,000 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT