ರಾಜ್ಯ

ಬೆಂಗಳೂರು: ಜೈನ ಮಂದಿರದಲ್ಲಿ ಬೆಳ್ಳಿ ದೋಚಿದ್ದ ನಾಲ್ವರು ಖದೀಮರ ಬಂಧನ

Manjula VN

ಬೆಂಗಳೂರು: ಶಾಂತಿನಗರದ ಜೈನ ಮಂದಿರದಲ್ಲಿ 9.75 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ನಾಲ್ವರು ಅಂತಾರಾಜ್ಯ ಖದೀಮರು ಬಂಧನಕ್ಕೊಳಗಾಗಿದ್ದಾರೆ.

ಬಂಧಿತರನ್ನು ಪ್ರವೀಣ್ ಕುಮಾರ್, ಜೋಶಿ ರಾಮ್, ರಾಜೇಂದ್ರ ಕುಮಾರ್ ಹಾಗೂ ಗೋವಿಂದ್ ಕುಮಾರ್ ಎಂದು ಗುರ್ತಿಸಲಾಗಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳಾದ ಮೋಹಿತ್ ರಾಮ್ ಹಾಗೂ ರೇಷ್ಮಾ ರಾಮ್ ಪತ್ತೆಗೆ ತನಿಖೆ ಮುಂದುವರೆದಿದೆ.

ಆರೋಪಿಗಳಿಂದ 9.75 ಲಕ್ಷ ಮೌಲದ್ಯದ 14 ಕೆಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆ,9 ರಂದು ರಾತ್ರಿ ಶಾಂತಿನಗರದ ಆದಿನಾಥ ಜೈನ ಮಂದಿರದಲ್ಲಿ ರೂ.17 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಹಾಗೂ 23 ಕೆಜಿ ಬೆಳ್ಳಿ ವಸ್ತುಗಳು ಕಳವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು.

ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಜೋಶಿ, ಟೈಲ್ಸ್ ಕೆಲಸಗಾರನಾಗಿ ದುಡಿಯುತ್ತಿದ್ದ. ಇನ್ನುಳಿದ ಆರೋಪಿಗಳ ಪೈಕಿ ಪ್ರವೀಣ್ ಹಾಗೂ ಮೋಹಿತ್ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಇತ್ತೀಚೆಗೆ ಶಾಂತಿನಗರದ ಆದಿನಾಥ ಜೈನ ಮಂದಿರಲ್ಲಿ ಟೈಲ್ಸ್ ಅಳವಡಿಸುವ ಕೆಲಸಕ್ಕೆ ಜೋಶಿ ತೆರಳಿದ್ದ. ಆ ವೇಳೆ ದೇವಾಲಯದಲ್ಲಿದ್ದ ಆಭರಣಗಳನ್ನು ನೋಡಿದ್ದ. ಈ ವೇಳೆ ಸುಲಭವಾಗಿ ಹಣ ಸಂಪಾದಿಸಲು ಮಂದಿರದಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಇನ್ನುಳಿದ ಆತನ ಸ್ನೇಹಿತರು ಸಾಥ್ ನೀಡಿದ್ದರು.

ಕಳ್ಳತನ ಮಾಡಲು ನಿರ್ಧರಿಸಿದ್ದ ಜೋಶಿ, ದೇವಾಲಯದ ಭದ್ರತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂಬ ಬಗ್ಗೆ ಮಾಹಿತಿ ಪಡೆದು ಸಂಚು ರೂಪಿಸಿದ್ದ. ಪೂರ್ವ ನಿಯೋಜಿತ ಸಂಚಿನಂತೆ ಸೆ9ರಂದು ರಾತ್ರಿ ತನ್ನ ತಂಡದೊಂದಿಗೆ ಬಂದಿ ಕಳ್ಳತನ ಮಾಡಿದ್ದ.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜೋಶಿ ಚಲನವಲನಗಳು ಪತ್ತೆಯಾಗಿತ್ತು. ಈತನ ಬಗ್ಗೆ ಮಂದಿರದ ಆಡಳಿತ ಮಂಡಳಿಯ ಸದಸ್ಯರನ್ನು ವಿಚಾರಿದಾಗ ಆತ ಟೈಲ್ಸ್ ಕೆಲಸಕ್ಕೆ ಬಂದಿದ್ದು ತಿಳಿದಿತ್ತು. ಈ ಸುಳಿವನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

SCROLL FOR NEXT