ರಾಜ್ಯ

ಬೆಳಗಾವಿ: ಬಿಲ್ ಪಾವತಿ ಬಾಕಿ; ಪಿಡಬ್ಲ್ಯುಡಿ ಕಚೇರಿ ಮುಂದೆ ವಿಷ ಕುಡಿದು ಗುತ್ತಿಗೆದಾರ ಆತ್ಮಹತ್ಯೆ ಯತ್ನ

Ramyashree GN

ಬೆಳಗಾವಿ: ಇಲ್ಲಿನ ಪಿಡಬ್ಲ್ಯುಡಿ ಕಚೇರಿ ಎದುರು 42 ವರ್ಷದ ಗುತ್ತಿಗೆದಾರರೊಬ್ಬರು ವಿಷ ಕುಡಿದು ಬುಧವಾರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನ ನಿವಾಸಿ ನಾಗಪ್ಪ ಬಳ್ಳಪ್ಪ ಭಾಂಗಿ ಎಂಬುವವರು ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದ ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

2022ರಲ್ಲಿ ನಡೆದಿರುವ ರಸ್ತೆ ದುರಸ್ತಿ ಕಾಮಗಾರಿಗೆ ಅಧಿಕಾರಿಗಳು 6.5 ಲಕ್ಷ ರೂಪಾಯಿ ಬಿಲ್‌ಗಳನ್ನು ಪಾವತಿಸಿಲ್ಲ ಎಂದು ಭಾಂಗಿ ಆರೋಪಿಸಿದ್ದಾರೆ. 

ಕುಟುಂಬ ಸದಸ್ಯರೊಂದಿಗೆ ಧರಣಿ ನಡೆಸಿದ ನಂತರ ಭಾಂಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅವರು ಬಾಕಿ ಬಿಲ್‌ಗಳನ್ನು ಪಾವತಿಸಿಲ್ಲ. ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ ಹೆಗಡೆ ಹಾಗೂ ಬಸವರಾಜ ಹಲಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಪಾಲಕ ಇಂಜಿನಿಯರ್ ಎಸ್‌ಎಸ್‌ ಸೊಬರದ್ ಅವರ ಎದುರೇ ಬಾಂಗಿ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಾಂಗಿಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ಅವರ ಕೆಲಸದಲ್ಲಿನ ದೋಷಗಳಿಂದಾಗಿ ಬಾಂಗಿಯ ಬಿಲ್‌ಗಳನ್ನು ಬಾಕಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT