ಬೆಂಗಳೂರು: ನಗರದ ಗುತ್ತಿಗೆದಾರರೊಬ್ಬರ ಮನೆ ಮೇಲೆ ದಾಳಿ ನಡೆಸಿದಾಗ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡ 42 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಮತ್ತು ಅದರ ನಾಯಕರಿಗೆ ಲಿಂಕ್ ಮಾಡಿದ್ದಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಐಟಿ ಇಲಾಖೆಯ ಪ್ರತಿನಿಧಿಗಳಂತೆ ಏಕೆ ವರ್ತಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹುಡುಕಾಟಗಳು, ಅದರ ಫಲಿತಾಂಶಗಳು ಮತ್ತು ವಶಪಡಿಸಿಕೊಂಡ ಸ್ವತ್ತಿನ ಬಗ್ಗೆ ಐಟಿ ಇಲಾಖೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ ಎಂದು ಅವರು ಸೂಚಿಸಿದರು.
'ಅವರು (ಬಿಜೆಪಿ-ಜೆಡಿಎಸ್) ಅವರಿಗೆ ಬೇಕಾದ ಏನು ಬೇಕಾದರೂ ಮಾತನಾಡುತ್ತಾರೆ. ಆದಾಯ ತೆರಿಗೆ ಇಲಾಖೆ ಅಧಿಕೃತ ಹೇಳಿಕೆಯನ್ನು ನೀಡಲಿ, ನಂತರ ಮಾತನಾಡೋಣ. ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅಥವಾ ಬಿಜೆಪಿ ನಾಯಕರು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಗಳಲ್ಲ. ಅವರು ಅದರ ಪ್ರತಿನಿಧಿಗಳಂತೆ ಮಾತನಾಡುತ್ತಿದ್ದಾರೆ' ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯದಲ್ಲಿ ಇನ್ನಷ್ಟು ಐಟಿ ದಾಳಿಗಳನ್ನು ನಿರೀಕ್ಷಿಸುವಿರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಏನನ್ನೂ ಹೇಳುವುದಿಲ್ಲ, ಆದಾಯ ತೆರಿಗೆ ಇಲಾಖೆ ಅವರ ಬಳಿ ಇರುವ ಮಾಹಿತಿಯನ್ನು ಬಿಡುಗಡೆ ಮಾಡಲಿ. ಅದರ ಬಗ್ಗೆ ನಂತರ ಮಾತನಾಡೋಣ’ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಹೌಹಾರಿದ ಅಧಿಕಾರಿಗಳು: ಬೆಡ್ ರೂಮ್ ಮಂಚದ ಕೆಳಗೆ 42 ಕೋಟಿ ರೂ. ಹಣ ಪತ್ತೆ!
ಅಧಿಕೃತ ಮೂಲಗಳ ಪ್ರಕಾರ, ಕೆಲವು ಗುತ್ತಿಗೆದಾರರಿಗೆ ಸೇರಿದ ಮನೆಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಮತ್ತು ನಗರದ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಹಲವಾರು ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿ ಹಲವಾರು ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು, ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣವನ್ನು ಗುತ್ತಿಗೆದಾರರಿಂದ ಕಮಿಷನ್ ರೂಪದಲ್ಲಿ ಸಂಗ್ರಹಿಸಲಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ತೆಗೆದಿಟ್ಟ ಹಣ; ಬಿಜೆಪಿ, ಜೆಡಿಎಸ್ ಆರೋಪ
ಪಂಚ ರಾಜ್ಯಗಳ ವಿಧಾನಸಬೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತೆಲಂಗಾಣ ಮತ್ತು ಮಧ್ಯ ಪ್ರದೇಶಕ್ಕೆ ಕರ್ನಾಟಕದಿಂದ ಹಣ ಸರಬರಾಜು ಆಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ, ಇದು ಎಟಿಎಂ ನಂತೆ ಕಾರ್ಯನಿರ್ವಹಿಸುತ್ತದೆ ಎಂದು ದೂರಿದ್ದರು.