ರಾಜ್ಯ

ಮೊಣಕಾಲಿನ ಬೈಪಾಸ್ ಸರ್ಜರಿಗೆ ಒಳಗಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ: ಐಸಿಯುಗೆ ವರ್ಗಾವಣೆ, ಆರೋಗ್ಯ ಸ್ಥಿರ

Sumana Upadhyaya

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅವರಿಗೆ ಸಿಎಬಿಜಿ-ಕರೋನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡಲಾಗಿದೆ. 

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯಾಕ್ ಸೈನ್ಸಸ್‌ ವಿಭಾಗದ ಅಧ್ಯಕ್ಷ ಖ್ಯಾತ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ ವಿವೇಕ್ ಜವಳಿ ಅವರು ಮಾಜಿ ಸಿಎಂ ಬೊಮ್ಮಾಯಿಯವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಕೆಲವು ಗಂಟೆಗಳ ಕಾಲ ನಡೆಯಿತು, ನಂತರ ಬೊಮ್ಮಾಯಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. 63 ವರ್ಷದ ಬೊಮ್ಮಾಯಿಯವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಅವರು ಸದ್ಯ ವೆಂಟಿಲೇಟರ್‌ನಲ್ಲಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲಾಗುವುದು.ಇಂದು ಸಂಜೆಯ ನಂತರ ಅವರು ಮಾತನಾಡಲು ಸಾಧ್ಯವಾಗಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಕಳೆದೆರಡು ದಿನಗಳ ಹಿಂದೆ ಬೊಮ್ಮಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಆಸ್ಪತ್ರೆಯಲ್ಲಿ ಪತ್ನಿ ಚೆನ್ನಮ್ಮ ಮತ್ತು ಮಗ ಭರತ್ ಕಾಣಿಸಿಕೊಂಡಿದ್ದರು. 

ಮೊಣಕಾಲು ನೋವಿನಿಂದ ಬಳಲುತ್ತಿದ್ದ ಮಾಜಿ ಸಿಎಂ: ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಎಡ ಮೊಣಕಾಲು ನೋವು ತೀವ್ರ ಕಾಡುತ್ತಿತ್ತು. ಅವರಿಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ವೈದ್ಯರು ಹಿಂದೆಯೇ ಸಲಹೆ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದ ವೇಳೆ ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಮೊಣಕಾಲಿನ ನೋವಿನಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ, ನೋವುನಿವಾರಕ ಔಷಧಗಳನ್ನು ಸೇವಿಸುತ್ತಿದ್ದರು. 

ತಮ್ಮ ಮೊಣಕಾಲು ಸಮಸ್ಯೆಗೆ ಈ ಹಿಂದೆ ಅವರು ಅನೇಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಮೈಸೂರಿನ ‘ನಾಟಿ ಔಷಧಿ’ ವೈದ್ಯ ಲೋಕೇಶ್ ಟೇಕಲ್ ಅವರಿಂದ ಚಿಕಿತ್ಸೆ ಪಡೆದಿದ್ದರು. ಆಡಿನ ಹಾಲು ಮತ್ತು ಕೆಲವು ಮಸಾಜ್ ಎಣ್ಣೆಗಳನ್ನು ಬಳಸಿದ್ದರು, ಆದರೆ ಇದು ಶಾಶ್ವತ ಪರಿಹಾರವನ್ನು ನೀಡಲಿಲ್ಲ. 

ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರೆ ಕನಿಷ್ಠ ಮೂರು ವಾರವಾದರೂ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಈ ಹಿಂದೆ ಹೇಳಿದ್ದರು. ಆದರೆ ರಾಜಕೀಯ ಜೀವನದ ಒತ್ತಡದಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಲೋಕಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗ ಇದೇ ಸೂಕ್ತ ಸಮಯವೆಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 

ಕರ್ನಾಟಕ ಬಿಜೆಪಿಯಲ್ಲಿ ಅತಿ ಉನ್ನತ ನಾಯಕ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ನಂತರ ಸಿಎಂ ಪಟ್ಟಕ್ಕೆ ಏರಿದ ಬಸವರಾಜ ಬೊಮ್ಮಾಯಿ ಸರ್ಕಾರ ಮೇಲೆ ಶೇಕಡಾ 40 ರಷ್ಟು ಕಮಿಷನ್ ಆರೋಪ ಭಾರೀ ಸುದ್ದಿ ಮಾಡಿತು. ಇದು ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಸಹ ಪರಿಣಾಮ ಬೀರಿತು.  ಜುಲೈ 2021 ರಿಂದ ಮೇ 2023 ರವರೆಗೆ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕೂಡ ಹೈಕಮಾಂಡ್ ನೀಡಿಲ್ಲ. ಸಾಮಾನ್ಯವಾಗಿ ಮಾಜಿ ಮುಖ್ಯಮಂತ್ರಿ ಅಥವಾ ಸೋತ ಪಕ್ಷದ ನಾಯಕನಿಗೆ ನೀಡಲಾಗುತ್ತದೆ.ಆದರೆ ಬೊಮ್ಮಾಯಿಯವರಿಗೆ ಅದು ಸಿಕ್ಕಿಲ್ಲ. 

ಬೊಮ್ಮಾಯಿ ಅವರಿಗೆ ತಂದೆ ಸಮಾನರಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೊಮ್ಮಾಯಿವರ ಶೀಘ್ರ ಆರೋಗ್ಯ ಚೇತರಿಕೆಗೆ ಹಾರೈಸಿದ್ದಾರೆ. 

ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಬೊಮ್ಮಾಯಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. 

SCROLL FOR NEXT