ರಾಜ್ಯ

ದಸರಾ ನೆಪದಲ್ಲಿ ಖಾಸಗಿ ಬಸ್​ಗಳಿಂದ ಸುಲಿಗೆ: ಟಿಕೆಟ್ ದರ ದಿಢೀರ್ ಏರಿಕೆ; ಹೆಚ್ಚುವರಿ ಬಸ್ ನಿಯೋಜಿಸಲು ಸರ್ಕಾರ ಮುಂದು!

Manjula VN

ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್ 21-24ರವರೆಗೆ ಸಾಲು ಸಾಲು ರಜೆ ಸಿಗಲಿದ್ದು, ಹೀಗಾಗಿ ಬಹುತೇಕ ಮಂದಿ ದಸರಾ ನೋಡಲು ಮೈಸೂರು, ತಮ್ಮ ಊರುಗಳಿಗೆ ಭೇಟಿ ನೀಡಲು, ಪ್ರವಾಸಕ್ಕೆ ಹೋಗಲು ಸಿದ್ಧತೆಗಳ ನಡೆಸುತ್ತಿದ್ದಾರೆ. ಆದರೆ, ದಸರಾ ನೆಪದಲ್ಲಿ ಖಾಸಗಿ ಬಸ್ ಗಳು ಸುಲಿಗೆಗೆ ಇಳಿದಿವೆ.

ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್ ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಶಕ್ತಿ ಯೋಜನೆಯಿಂದ ತಮ್ಮ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಖಾಸಗಿ ಬಸ್ ಗಳ ನಿರ್ವಾಹಕರು ಹೇಳಿದ್ದು, ಈ ನಷ್ಟವನ್ನು ದಸರಾ ಹಬ್ಬದ ಸಂದರ್ಭದಲ್ಲಿ ತುಂಬಿಕೊಳ್ಳಲು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಖಾಸಗಿ ಬಸ್ ನಿರ್ವಾಹಕರ ಸಂಘದ ಸದಾನಂದ ಛತ್ರದ ಮಾತನಾಡಿ, ರಾಜ್ಯದಾದ್ಯಂತ ಸುಮಾರು 5,000 ಖಾಸಗಿ ಬಸ್‌ಗಳು ಸೇವೆ ಸಲ್ಲಿಸುತ್ತಿವೆ. ಈ ಬಸ್‌ಗಳು ಹಬ್ಬಗಳ ಸಮಯದಲ್ಲಿ ಟಿಕೆಟ್ ದರವನ್ನು ಶೇ.30ರಷ್ಟು ಏರಿಕೆ ಮಾಡಿದೆ. ಇವು ಇನ್ನು ಕೆಲಗಳ ಕಾಲ ಮಾತ್ರ ಇರಲಿವೆ ಎಂದು ಹೇಳಿದ್ದಾರೆ.

ದರಗಳು ಮತ್ತು ಕಾರ್ಯಾಚರಣೆಯ ಸಮಯವನ್ನು RTO ನಿಂದ ನಿಗದಿಪಡಿಸಲಾಗಿದೆ, ಮಾರ್ಗಸೂಚಿಯಂತೆಯೇ ನಾವು ನಡೆಯಬೇಕಿದೆ. ಗುತ್ತಿಗೆ ಮೇಲೆ ವಾಹನ ಚಾಲನೆ ಮಾಡುವವರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ದಸರಾ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಅಕ್ಟೋಬರ್ 20 ರಿಂದ 26 ರ ನಡುವೆ ಬೆಂಗಳೂರಿನಿಂದ ವಿವಿಧೆಡೆ 2 ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳ ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚುವರಿ ದರ ವಿಧಿಸುತ್ತಿರುವ ಖಾಸಿ ಬಸ್ ನಿರ್ವಾಹಕರಿಗೆ ಗಣೇಶ ಹಬ್ಬದ ಸಂದರ್ಭದಲ್ಲಿಯೇ ಎಚ್ಚರಿಕೆ ನೀಡಲಾಗಿತ್ತು. ಈಗಲೂ ಎಚ್ಚರಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT