ರಾಜ್ಯ

ಏಪ್ರಿಲ್ ಒಳಗೆ ಶೇ.50ರಷ್ಟು ತಕರಾರು ಪ್ರಕರಣ ಇತ್ಯರ್ಥಗೊಳಿಸಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಗಡುವು

Manjula VN

ಬೆಂಗಳೂರು: ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ನಡೆದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳ ತಿಂಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 18,000 ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಬಾಕಿ ಇವೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಂತೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಒಟ್ಟಾರೆ ಪ್ರಕರಣಗಳ ಪೈಕಿ ಈ ನ್ಯಾಯಾಲಯಗಳಲ್ಲೇ 16,440 ಪ್ರಕರಣಗಳು ಬಾಕಿ ಇವೆ. ಇಷ್ಟೊಂದು ಪ್ರಕರಣಗಳು ಬಾಕಿ ಉಳಿಯಲು ಕಾರಣವೇನು? 5 ವರ್ಷಕ್ಕೂ ಹಿಂದಿನ ಪ್ರಕರಣಗಳೂ ಸಹ ಇತ್ಯರ್ಥವಾಗದಿದ್ದರೆ ಜನರ ಪಾಡು ಏನಾಗಬೇಕು? ಅವರೇನು ಪ್ರತಿದಿನ ಡಿಸಿ,ಎಸಿ, ತಹಶೀಲ್ದಾರ್‌ ಕಚೇರಿಗಳಿಗೆ ಅಲೆಯುತ್ತಲೇ ಇರಬೇಕು? ಇದಕ್ಕೆ ಪರಿಹಾರವಾದರೂ ಏನು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಜನರ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ಪ್ರಕರಣಗಳನ್ನು ಶೀಘ್ರವೇ ವಿಲೇಗೊಳಿಸಬೇಕು. ಅಗತ್ಯವಿದ್ದರೆ, ವಿಶೇಷ ಜಿಲ್ಲಾಧಿಕಾರಿಗಳಿಗೆ ತಕರಾರು ಪ್ರಕರಣಗಳ ಇತ್ಯರ್ಥದ ಜವಾಬ್ದಾರಿ ವಹಿಸಬೇಕು. ಮುಂದಿನ ಏಪ್ರಿಲ್‌ ಒಳಗೆ ಶೇ 50 ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಯೋಜನೆ ರೂಪಿಸಿ, ಸಕಾರಾತ್ಮಕ ಫಲಿತಾಂಶ ನೀಡಬೇಕು’ ಎಂದು ಸೂಚನೆ ನೀಡಿದರು.

SCROLL FOR NEXT