ರಾಜ್ಯ

ಮಂಗಳೂರು: ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೃಷಿ ಇಲಾಖೆ ಅಧಿಕಾರಿ

Ramyashree GN

ಮಂಗಳೂರು: ಕೃಷಿ ಇಲಾಖೆಯ ಉಪನಿರ್ದೇಶಕರೊಬ್ಬರು 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಸಿಬ್ಬಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಸಾರ್ವಜನಿಕರಿಗೆ ನೀಡಿದ್ದಕ್ಕೆ ಬಾಕಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮಂಗಳೂರಿನ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಅವರು ಲಂಚ ಕೇಳಿದ್ದರು.

ದೂರುದಾರರಾದ ಎನ್‌ಪಿ ಪರಮೇಶ್ ಅವರು ಅರಣ್ಯ ಇಲಾಖೆಯಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅವರನ್ನು ತಾತ್ಕಾಲಿಕವಾಗಿ ಕೃಷಿ ಇಲಾಖೆಯ ಜಲಾನಯನ ಇಲಾಖೆಗೆ ನಿಯೋಜಿಸಲಾಗಿತ್ತು. ಸದ್ಯ ಅವರು ಆಗಸ್ಟ್ 31ರಂದು ತಮ್ಮ ಸ್ಥಾನದಿಂದ ನಿವೃತ್ತರಾಗಿದ್ದರು.

ನರ್ಸರಿ ಮಾಲೀಕರು ಹಾಗೂ ಗುತ್ತಿಗೆದಾರರು ನೀಡಿದ್ದ ಸಸಿಗಳಿಗೆ 50 ಲಕ್ಷ ರೂಪಾಯಿ ಬಾಕಿ ಪಾವತಿಸಬೇಕಿತ್ತು.

ದೂರುದಾರರು ಅಕ್ಟೋಬರ್ 4ರಂದು ಭಾರತಮ್ಮ ಅವರನ್ನು ಸಂಪರ್ಕಿಸಿ ಬಾಕಿ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದರು. ಆದರೆ, ಅದರ ಕ್ಲಿಯರೆನ್ಸ್‌ಗಾಗಿ ಒಟ್ಟು ಬಿಲ್‌ನ ಶೇ 15ರಷ್ಟು ಮೊತ್ತವನ್ನು ನೀಡುವಂತೆ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅಕ್ಟೋಬರ್ 20ರಂದು ದೂರುದಾರರು ಬಿಲ್ ಬಗ್ಗೆ ವಿಚಾರಿಸಲು ಅಧಿಕಾರಿಯನ್ನು ಮತ್ತೆ ಭೇಟಿ ಮಾಡಿದರು ಮತ್ತು ಆ ಸಮಯದಲ್ಲಿ ಅವರು ಲಂಚದ ಮೊತ್ತವನ್ನು 1 ಲಕ್ಷ ರೂ.ಗೆ ಇಳಿಸಿದ್ದರು. ಬಳಿಕ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಶನಿವಾರ ಅಧಿಕಾರಿಯನ್ನು ಬಂಧಿಸಲಾಗಿದೆ.

ಭಾರತಮ್ಮ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿಎ ಸೈಮನ್ ಭಾನುವಾರ ಇಲ್ಲಿ ತಿಳಿಸಿದರು.

ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ಉಪ ಎಸ್‌ಪಿ ಕಲಾವತಿ, ಬಿ. ಚಲುವರಾಜು, ಇನ್ಸ್‌ಪೆಕ್ಟರ್ ಪಿ ಸುರೇಶ್ ಕುಮಾರ್ ಹಾಗೂ ಇತರ ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

SCROLL FOR NEXT