ರಾಜ್ಯ

ಯಾರಿಗೂ ನೋವುಂಟುಮಾಡುವ ಉದ್ದೇಶದಿಂದ ನಾನು ಮಾತನಾಡಿದ್ದಲ್ಲ, ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಶಾಸಕ ರಾಜು ಕಾಗೆ

Sumana Upadhyaya

ಚಿಕ್ಕೋಡಿ: ಕೆಲ ದಿನಗಳ ಹಿಂದೆ ತುಂಬಿದ ಸಭೆಯಲ್ಲಿ ಸೌಂದರ್ಯದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಆಗಿ ವ್ಯಾಪಕ ಸುದ್ದಿಯಾಗಿದ್ದರು ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ. 

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ 70 ವರ್ಷದ ಕಾಂಗ್ರೆಸ್ ಶಾಸಕ ರಾಜು ಕಾಗೆ ನರ್ಸ್‌ಗಳ ಸೌಂದರ್ಯದ ಬಗ್ಗೆ ಮಾತನಾಡುತ್ತಾ, ಲಿವರ್ ಟ್ರಾನ್ಸ್‌ಪ್ಲಾಂಟ್ (Liver Transplant) ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ ಎಂದರು. 

ಈ ವೇಳೆ ವೈದ್ಯರು ದಿನವೂ ಬಂದು ಹೇಗಿದ್ದೀರಿ ಅಂತಾ ಕೇಳೋರು. ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ. ನನ್ನ ಆರೋಗ್ಯಕ್ಕೆ ಏನು ಆಗಿಲ್ಲ ರೀ. ನನ್ನ ಆಪರೇಷನ್ ಸಕ್ಸಸ್ ಮಾಡಿದ್ದೀರಿ, ಎಲ್ಲಾ ಆಗಿದೆ. ಆದರೆ ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ. ಅದು ನನಗೆ ಬೇಸರವಾಗುತ್ತಿದೆ ಎಂದು ಹೇಳಿದ್ದೆ ಎಂದಿದ್ದರು. 

ರಾಜು ಕಾಗೆ ಭಾಷಣಕ್ಕೆ ಸಭೆಯಲ್ಲಿ ನೆರೆದಿದ್ದ ಜನ ಕೇಕೆ ಹಾಕಿದ್ದಾರೆ. ವೇದಿಕೆಯಲ್ಲಿದ್ದ ಲಕ್ಷ್ಮಣ ಸವದಿ ಉದ್ದೇಶಿಸಿ ಆಡಿದ್ದ ಮಾತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 

ವಿಡಿಯೊ ಹೇಳಿಕೆಯಲ್ಲಿ ಕ್ಷಮೆ: ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದು ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶದಿಂದಲ್ಲ. ನಾನು ನಾಲ್ಕು ಗೋಡೆ ಮಧ್ಯೆ ಮಾತನಾಡಿಲ್ಲ, ಸಾವಿರಾರು ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ. ನಾನು ತಮಾಷೆಗೆ ನನಗೆ ವಯಸ್ಸಾಯ್ತಲ್ಲ ಎಂದು ಹೇಳಿದ್ದು, ಅದಕ್ಕೆ ನಾನಾ ಥರದ ಅರ್ಥ ಕಲ್ಪನೆ ಮಾಡಬಹುದು. ಯಾರಿಗೂ ನೋವುಂಟುಮಾಡುವ ಉದ್ದೇಶದಿಂದ, ಯಾರನ್ನೂ ಉದ್ದೇಶಿಸಿ ನಾನು ಮಾತನಾಡಿದ್ದಲ್ಲ, ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ನನ್ನ ಮಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

SCROLL FOR NEXT