ರಾಜ್ಯ

ಹಳೇ ವಾಹನಗಳ ಸ್ಕ್ರ್ಯಾಪಿಂಗ್ ನೀತಿ: ರಿಯಾಯಿತಿಗಳ ಕುರಿತು ಗೊಂದಲ ನಿವಾರಣೆ ಸದ್ಯದಲ್ಲೆ!

Sumana Upadhyaya

ಬೆಂಗಳೂರು: 1986ಕ್ಕೆ ಮೊದಲು ರಿಜಿಸ್ಟರ್ ಆಗಿರುವ ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ರದ್ದಿಗೆ ಹಾಕುವ ಪ್ರಕ್ರಿಯೆ, ರಾಜ್ಯದ ಮೊದಲ ರಿಜಿಸ್ಟರ್ಡ್ ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯದಲ್ಲಿ (RVSF) ಈಗಾಗಲೇ ಆರಂಭವಾಗಿದೆ. ಆದರೆ, ರಿಯಾಯಿತಿ ಸೌಲಭ್ಯವನ್ನು ವಾಹನದ ಮಾಲೀಕರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ ಎಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ, 2022 ರ ಪ್ರಕಾರ, ವಾಹನವನ್ನು ರದ್ದಿಗೆ ಹಾಕಿದ ನಂತರ, ಅದರ ಮಾಲೀಕರಿಗೆ 'ಸರ್ಟಿಫಿಕೇಟ್ ಆಫ್ ಡೆಪಾಸಿಟ್' (COD) ನ್ನು ಕೊಡಲಾಗುತ್ತದೆ. ಇದನ್ನು ಹೊಸ ವಾಹನ ಮತ್ತು ಇತರೆಗಳನ್ನು ಖರೀದಿಸುವಾಗ ತೆರಿಗೆ ರಿಯಾಯಿತಿಗಳನ್ನು ಪಡೆಯಲು ಬಳಸಬಹುದು. ರಿಯಾಯಿತಿ ನೀಡಲು ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆಯುತ್ತಿದೆ. ಯಾವುದೇ ಗೊಂದಲಕ್ಕೀಡಾಗದಂತೆ ತೆರಿಗೆ ರಿಯಾಯಿತಿಯ ‘ಸುಲಭ ಅನುಷ್ಠಾನದ ಮಾರ್ಗ’ವನ್ನು ಜಾರಿಗೆ ತರುವ ಬಗ್ಗೆ ಯೋಜನೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಅಧಿಕಾರಿಗಳು, ದೇವನಹಳ್ಳಿಯಲ್ಲಿ ಮೊದಲ ಆರ್‌ವಿಎಸ್‌ಎಫ್‌ನಲ್ಲಿ ವಾಹನ ಸ್ಕ್ರ್ಯಾಪಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹಳೆಯ ಅನರ್ಹ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ಸ್ಕ್ರ್ಯಾಪ್ ಗೆ ಹಾಕಲಾಗುತ್ತಿದೆ. ಆದಾಗ್ಯೂ, ಸ್ಕ್ರ್ಯಾಪ್ ಮಾಡಿದ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ರಿಯಾಯಿತಿಗಳನ್ನು ನೀಡುವ ಬಗ್ಗೆ ಗೊಂದಲವಿದೆ.

ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿಯ ಪ್ರಕಾರ, ಉದಾಹರಣೆಗೆ ವಾಹನ ಮಾಲೀಕರು 1 ಲಕ್ಷ ರೂಪಾಯಿ ತೆರಿಗೆ ಪಾವತಿಸಿದ್ದರೆ, ಅವರು ಹೊಸ ವಾಹನವನ್ನು ಖರೀದಿಸುವಾಗ ಅದರಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ರೂಪದಲ್ಲಿ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

1986 ರ ಮೊದಲು ನೋಂದಣಿಯಾದ ದ್ವಿಚಕ್ರ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ 500 ರೂಪಾಯಿ ಮತ್ತು 1995 ರ ಮೊದಲು ನೋಂದಾಯಿಸಲಾದ ಲಘು ಮೋಟಾರು ವಾಹನಗಳಿಗೆ 3,000 ರೂಪಾಯಿಗಳನ್ನು ವಿನಾಯಿತಿ ನೀಡಲಾಗುತ್ತದೆ. ಇವುಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುವ ನಿರೀಕ್ಷೆಯಿದ್ದು, ಏಕರೂಪದ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಅಲ್ಲದೆ, ಹಳೆಯ ಸ್ಕ್ರ್ಯಾಪ್ಡ್ ವಾಹನಗಳ ಮಾಲೀಕರು ತಮ್ಮ ಆರ್‌ಟಿಒದಿಂದ ಅನುಮೋದನೆ ಪಡೆಯಬೇಕು ಎಂಬ ನಿಯಮವನ್ನು ತೆಗೆದುಹಾಕಿ ಪ್ರಕ್ರಿಯೆಯನ್ನು ಹೆಚ್ಚು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಹೇಳಿದರು. 

ರಿಯಾಯಿತಿಗಳನ್ನು ತಲುಪಿಸುವಲ್ಲಿ ಏಕರೂಪದ ವ್ಯವಸ್ಥೆಯನ್ನು ನಿರ್ವಹಿಸಲು, ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾಫ್ಟ್‌ವೇರ್ ನ್ನು ಅಭಿವೃದ್ಧಿಪಡಿಸುತ್ತಿದೆ, ಆದರೆ ಇದು ಸಮಯ ತೆಗೆದುಕೊಳ್ಳುತ್ತಿದೆ. ಒಮ್ಮೆ ಅದು ಸಿದ್ಧವಾದ ನಂತರ, ಯಾವುದೇ ಗೊಂದಲವಿಲ್ಲ ಎಂದು ಅಧಿಕಾರಿಗಳು ಹೇಳಿದರು.

SCROLL FOR NEXT