ರಾಜ್ಯ

ಸಕ್ರೆಬೈಲ್ ಆನೆ ಶಿಬಿರ: 18 ತಿಂಗಳ ಗರ್ಭೀಣಿ 'ಭಾನುಮತಿ' ಆನೆ ಬಾಲ ಕತ್ತರಿಸಿದ ಕಿಡಿಗೇಡಿಗಳು!

Vishwanath S

ಶಿವಮೊಗ್ಗ​: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರದಲ್ಲಿ ದುಷ್ಕರ್ಮಿಗಳು ಆನೆಯ ಮೇಲೆ ದಾಳಿ ಮಾಡಿ ಬಾಲವನ್ನು ತುಂಡರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಗಳು ಭಾನುಮತಿ ಎಂಬ 18 ತಿಂಗಳ ಗರ್ಭಿಣಿ ಆನೆಯ ಮೇಲೆ ದಾಳಿ ಮಾಡಿದ್ದರು. ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಸಿಬ್ಬಂದಿ ಶಿಬಿರದ ಆವರಣದಲ್ಲಿ ಆನೆಯನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ದುಷ್ಕರ್ಮಿಗಳು ಈ ಕುಕೃತ್ಯ ಎಸಗಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ನೆಲದ ಮೇಲೆ ರಕ್ತ ಚಿಮ್ಮುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಆನೆ ಬಳಿ ಬಂದು ನೋಡಿದಾಗ ಬಾಲ ತುಂಡಾಗಿತ್ತು. ಆರೋಪಿಗಳು ಹರಿತವಾದ ಆಯುಧದಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೆಯ ಬಾಲವನ್ನು ಅರ್ಧ ಇಂಚು ಕತ್ತರಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಸನ್ನ ಕೃಷ್ಣ ಪಟಗಾರ ತಿಳಿಸಿದ್ದಾರೆ.

ತುಂಡಾಗಿರುವ ಭಾಗಕ್ಕೆ ಮತ್ತೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಭಾನುಮತಿ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಯಾವುದೇ ತೊಂದರೆ ಇಲ್ಲ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಕ್ರೆಬೈಲು ಆನೆ ಶಿಬಿರವು ಖೆಡ್ಡಾಕ್ಕೆ ಬಿಳಿಸಿದ ಆನೆಗಳನ್ನು ಪಳಗಿಸುವ ಅರಣ್ಯ ಶಿಬಿರವಾಗಿದೆ. ಶಿವಮೊಗ್ಗದಿಂದ 14 ಕಿ.ಮೀ ದೂರದಲ್ಲಿರುವ ಇದು ರಾಜ್ಯದ ಆನೆಗಳಿಗೆ ತರಬೇತಿ ನೀಡುವ ಅತ್ಯುತ್ತಮ ಶಿಬಿರ ಎಂದು ಪರಿಗಣಿಸಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯು ನಿರ್ವಹಿಸುತ್ತಿರುವ ಶಿಬಿರವು ವನ್ಯಜೀವಿ ಪ್ರೇಮಿಗಳನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಕರ್ನಾಟಕದ ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿದೆ, ಇದು ಸಾಮಾನ್ಯ ಜನರಿಗೆ ದೊಡ್ಡ ಆನೆಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡುತ್ತದೆ.

SCROLL FOR NEXT