ರಾಜ್ಯ

ಬೆಂಗಳೂರು: ತಪ್ಪಿಸಿಕೊಂಡ ಚಿರತೆ ಸೆರೆ ಹಿಡಿಯಲು ಐದು ತಂಡ ನಿಯೋಜನೆ

Lingaraj Badiger

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ಚಿರತೆ ಕಾಣಿಸಿಕೊಂಡ ಮೂರು ದಿನಗಳ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಹಿಡಿಯಲು ಐದು ತಂಡಗಳನ್ನು ನಿಯೋಜಿಸಿದ್ದಾರೆ.

ಸೋಮವಾರವೂ ಚಿರತೆಯನ್ನು ಸೆರೆ ಹಿಡಿಯಲು ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿತ್ತು.

ಅರಣ್ಯಾಧಿಕಾರಿಗಳ ಪ್ರಕಾರ, ಅಕ್ಟೋಬರ್ 27 ರಂದು ರಾತ್ರಿ ಚಿರತೆ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅಂದಿನಿಂದ ಚಿರತೆ ಕಾಣಿಸಿಕೊಂಡಿಲ್ಲ.

ನಮ್ಮ ಬಳಿ ಇರುವುದು ಸಿಸಿಟಿವಿ ದೃಶ್ಯಾವಳಿಗಳು ಮಾತ್ರ. ಹೀಗಾಗಿ ಚಿರತೆ ಸೆರೆಗೆ ಐದು ತಂಡಗಳನ್ನು ರಚಿಸಿದ್ದು, ಈ ತಂಡಗಳನ್ನು 10 ಎಕರೆ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹೇಳಿದ್ದಾರೆ.

ಚಿರತೆ ಕಾಣಿಸಿಕೊಂಡ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ(ಬಿಎನ್‌ಪಿ) ಸುಮಾರು 8 ಕಿಮೀ ದೂರದಲ್ಲಿದೆ. ಚಿರತೆ ಬೇಟೆಯನ್ನು ಹುಡುಕಿಕೊಂಡು ಉದ್ಯಾನವನದಿಂದ ಹೊರಗೆ ಬಂದಿರುವ ಸಾಧ್ಯತೆ ಇದೆ. ಅದರ ನಂತರ ಉದ್ಯಾನವನಕ್ಕೆ ಹಿಂತಿರುಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶುವೈದ್ಯರ ತಂಡವನ್ನು ಕೂಡ ನಿಯೋಜಿಸಲಾಗಿದೆ. ಇದು ಗಂಡು ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. "ಆದಾಗ್ಯೂ, ಚಿರತೆಯ ವಯಸ್ಸನ್ನು ಕಂಡುಹಿಡಿಯಲಾಗಲಿಲ್ಲ" ಎಂದು ಅವರು ಹೇಳಿದ್ದಾರೆ.

ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ವಾಸಿಸುವ ಜನರು ರಾತ್ರಿ ವೇಳೆ ಹೊರಗೆ ಹೋಗದಂತೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ 1926 ಗೆ ಡಯಲ್ ಮಾಡುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

SCROLL FOR NEXT