ರಾಜ್ಯ

ಮಡಿಕೇರಿ: ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

Vishwanath S

ಮಡಿಕೇರಿ: ಕೊಡಗಿನಲ್ಲಿ ಅರಣ್ಯ ಇಲಾಖೆಯ ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್‌ಆರ್‌ಟಿ)ಯಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 

ಇಂದು ಬೆಳಗ್ಗೆ ಮಡಿಕೇರಿ ತಾಲೂಕಿನ ಕೆದಕಲ್ ನಲ್ಲಿ ಆನೆ ವಿರುದ್ಧದ ಕಾರ್ಯಾಚರಣೆ ವೇಳೆ ದಾಳಿ ನಡೆದಿದ್ದು ಕುಶಾಲನಗರ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ಗಿರೀಶ್ (35) ಮೃತಪಟ್ಟಿದ್ದಾರೆ.

ಮುಂಜಾನೆ ಕೆದಕಲ್ ನಿವಾಸಿ ಮುರುಗೇಶ್ ಎಂಬುವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಆನೆ ದಿಢೀರ್ ದಾಳಿಗೆ ಮುಂದಾಗಿತ್ತು. ಈ ವೇಳೆ ಮುರುಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದರೂ ಬೈಕ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯ ನಂತರ, ಕೆದಕಲ್ ಎಸ್ಟೇಟ್‌ಗಳಾದ್ಯಂತ ಹಿಂಡು ಹಿಂಡಾಗಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ರಾಪಿಡ್ ರೆಸ್ಪಾನ್ಸ್ ಟೀಮ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ಅಂತೆಯೇ, ಆರ್‌ಆರ್‌ಟಿ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣೆಗೆ ಮುಂದಾದರು. ಎಸ್ಟೇಟ್‌ಗಳಲ್ಲಿ ಹಿಂಡು ಹಿಂಡಾಗಿ ಬೀಡುಬಿಟ್ಟಿದ್ದ ಆನೆಗಳನ್ನು ಪತ್ತೆ ಹಚ್ಚಿದ ತಂಡ ಪಟಾಕಿ ಸಿಡಿಸಿ ಮತ್ತೆ ಕಾಡಿಗೆ ಓಡಿಸಿತು. ಆದರೆ, ಕಾಡಾನೆಯೊಂದು ಪ್ರತಿದಾಳಿ ನಡೆಸಿತ್ತು. ಈ ವೇಳೆ ಕೆಲವರು ಪ್ರಾಣಾಪಾಯದಿಂದ ಪಾರಾದರೆ, ದಾಳಿಯಲ್ಲಿ ಗಿರೀಶ್ ಸಿಕ್ಕಿಬಿದ್ದಿದ್ದಾರೆ. ಗಿರೀಶ್‌ನನ್ನು ಆನೆ ತುಳಿದು ಸಾಯಿಸಿದ್ದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ. 

ಕಾರ್ಯಾಚರಣೆ ನಿರ್ವಹಿಸಲು ಸಿಬ್ಬಂದಿ ಸುಸಜ್ಜಿತರಾಗಿದ್ದರು. ಆದರೆ ಆನೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಗಿರೀಶ್ ಅವರ ಜೇಬಿನಲ್ಲಿ ಪಟಾಕಿಗಳಿದ್ದವು, ಆದರೆ ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಮಡಿಕೇರಿ ಡಿಸಿಎಫ್ ಎಟಿ ಪೂವಯ್ಯ ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರೀಶ್ ಸಹೋದರಿಯನ್ನು ಅಗಲಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಇಲಾಖೆಯಲ್ಲಿದ್ದರು ಎಂದು ಹೇಳಿದರು.

SCROLL FOR NEXT