ರಾಜ್ಯ

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಬಿಳಿ ಕಡವೆ ಪ್ರತ್ಯಕ್ಷ!

Ramyashree GN

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಮಂಗಳವಾರ ಅಪರೂಪದ ಶ್ವೇತ ವರ್ಣದ ಕಡವೆ ಕಂಡು ಬಂದಿದ್ದು, ಅಚ್ಚರಿ ಮೂಡಿಸಿದೆ.

ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಅಪರೂಪದ ಬಿಳಿಬಣ್ಣದ ಹೆಣ್ಣು ಕಡವೆಯ ಚಿತ್ರ ಸೆರೆಯಾಗಿದೆ. 

ಈ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಳಿ ಕಡವೆ ಪತ್ತೆಯಾಗಿದೆ. 2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆ ಕಂಡುಬಂದಿತ್ತು ಎಂದು ತಂಡ ಮಾಹಿತಿ ನೀಡಿದೆ.

ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ತಿರುಗುವ ವಿರಳ ಪ್ರಕ್ರಿಯೆಯನ್ನು ಲ್ಯೂಸಿಸಮ್ ಎನ್ನಲಾಗುತ್ತದೆ. ಇದು ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಬಿನಿಸಂ ಸ್ಥಿತಿಗಿಂತ ಭಿನ್ನವಾಗಿರುತ್ತದೆ. ಅಲ್ಬಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಕಡವೆಯ ಈ ಸ್ಥಿತಿಯನ್ನು ಸ್ಯೂಸಿಸ್ಟಿಕ್ ಎಂದು ಗುರುತಿಸಲಾಗಿದೆ. 

ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ಹಿರಿಯ ವಿಜ್ಞಾನಿ ಸಂಜಯ್ ಗುಬ್ಬಿ ಅವರು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಸಾಂಬಾರ್ ಜಿಂಕೆಯ ಅಪರೂಪದ ದೃಶ್ಯದ ಬಗ್ಗೆ ಸಿಬ್ಬಂದಿಗೆ ಆಗಸ್ಟ್ 31 ರಂದು ಪತ್ರ ಬರೆದಿದ್ದಾರೆ ಎಂದು ಸಿಡಬ್ಲ್ಯುಎಸ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಎ ಟಿಎನ್ಐಇಗೆ ತಿಳಿಸಿದರು.

'ನಾನು ಮತ್ತು ನನ್ನ ತಂಡ ಮಂಗಳವಾರ ಕ್ಷೇತ್ರ ಭೇಟಿಯ ಸಮಯದಲ್ಲಿ ಈ ಪ್ರಾಣಿಯನ್ನು ನೋಡಿದೆವು. ಇದು ಸುಮಾರು 3-5 ವರ್ಷ ವಯಸ್ಸಿನ ಹೆಣ್ಣು ಕಡವೆ ಆಗಿದೆ. ಈ ಅರಣ್ಯ ಪ್ರದೇಶದಲ್ಲಿ ಇದು ಮೊದಲನೆಯದು. ಆದರೆ, ಕರ್ನಾಟಕದ ಕಾಡುಗಳಿಗೆ ಹೊಸದಲ್ಲ. ಲ್ಯೂಸಿಸಮ್ ಒಂದು ಅನುವಂಶಿಕ ರೂಪಾಂತರವಾಗಿದೆ ಮತ್ತು ನೈಸರ್ಗಿಕವಾಗಿ ಸಂಭವಿಸುತ್ತದೆ' ಎಂದು ಅವರು ಹೇಳಿದರು.

ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿಳಿ ನವಿಲು ಕಂಡುಬಂದಿದೆ ಎಂದು ಅವರು ಹೇಳಿದರು. 

SCROLL FOR NEXT