ರಾಜ್ಯ

ಅಪ್ರಾಪ್ತೆ ಜೊತೆ ವಿವಾಹ ಆರೋಪ: ನಂಜನಗೂಡು ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ಪೋಕ್ಸೋ ಕೇಸ್ ದಾಖಲು

Shilpa D

ಮೈಸೂರು: ನಂಜನಗೂಡು ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ಮತ್ತು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಕ್ಲಾಸ್ ಒನ್ ಸಿವಿಲ್ ಗುತ್ತಿಗೆದಾರ ಹರೀಶ್ ಕುಮಾರ್ 2023ರ ಫೆ.15ರಂದು ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಶ್ರೀ ಕಮಲಮ್ಮ ಗುರುಮಲ್ಲಪ್ಪ ಛತ್ರದಲ್ಲಿ 17 ವರ್ಷದ ಬಾಲಕಿಯನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಒಂದೇ ಜಾತಿಯವರು ಮತ್ತು ತಾಲ್ಲೂಕಿನ ಹರಿಯೂರು ಗ್ರಾಮದವರಾಗಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್) ಉಪಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಹರಿಯೂರು ಗ್ರಾಮಸ್ಥರು ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರಿಗೆ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹರೀಶ್ ಕುಮಾರ್ ಫೆಬ್ರವರಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಮದುವೆಗೆ ಯಾವುದೇ ತೊಂದರೆಯಾಗದಂತೆ ಆಧಾರ್ ಕಾರ್ಡ್‌ನಲ್ಲಿ ಆಕೆಯ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾರೆ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.

 ಶಾಲಾ ದಾಖಲಾತಿ ಪ್ರಕಾರ ಬಾಲಕಿಯ ಜನ್ಮ ದಿನಾಂಕ 2005ರ ಮೇ 19 ಆಗಿದೆ. ಆಕೆಗೆ ಇನ್ನೂ 18 ವರ್ಷ ತುಂಬಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಬಾಲಕಿ ಹುರಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ. ಸದ್ಯ ಆಕೆ ಗರ್ಭಿಣಿಯಾಗಿದ್ದು, ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಹರೀಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

ದೂರಿನನ್ವಯ ಸಿಡಿಪಿಒ ಅಧಿಕಾರಿಗಳು ಶಾಲಾ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಗರ್ಭ ಧರಿಸಿರುವ ಸಂಬಂಧ ಆಸ್ಪತ್ರೆಯ ವರದಿಗಳನ್ನು ಪರಿಶೀಲಿಸಿ, ಹರೀಶ್ ಕುಮಾರ್ ವಿರುದ್ಧ ಮಂಗಳವಾರ ನಂಜನಗೂಡು ನಗರ ಠಾಣೆಗೆ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಸುಶೀಲಾ ಎಸ್.ಬಿ. ಪ್ರಕರಣ ದಾಖಲಿಸಿದ್ದಾರೆ.

ಐಪಿಸಿ 376 (2) ಎನ್ (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು), ಪೋಕ್ಸೊ ಕಾಯ್ದೆ, 2012 ಮತ್ತು ಸೆಕ್ಷನ್ 9,10 ಮತ್ತು 11 (ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT